ಬೆಂಗಳೂರು, ಜು. 18(DaijiworldNews/AK): ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಇಡೀ ಅಧಿವೇಶನದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಬಗ್ಗೆ ಇಡಿ ವರದಿ ಬಿಡುಗಡೆ ಮಾಡಿದೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಡೆತ್ ನೋಟಿನಲ್ಲಿ ಸಚಿವರೇ ಕಾರಣ ಎಂದು ತಿಳಿಸಿದ್ದರೂ, ಮುಖ್ಯಮಂತ್ರಿಯಾದವರು ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಮುಖ್ಯಮಂತ್ರಿಯವರು ಈ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ಮಾಡಿರುವುದು ಇದರಿಂದ ಸ್ಪಷ್ಟಗೊಂಡಿದೆ ಎಂದು ಆಕ್ಷೇಪಿಸಿದರು.
ಮತದಾರರಿಗೆ ಮದ್ಯ ಹಂಚಲು ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಹಣ ಬಳಸಿದ್ದಾಗಿ ಇ.ಡಿ. ಪ್ರೆಸ್ ನೋಟ್ ತಿಳಿಸಿದೆ. ಸಿಎಂ ಅವರಿಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಹೇಳಿದರು.
ಸಿಎಂ ಅವರು ಸದನದಲ್ಲಿ ಒಂದು ಗಂಟೆಯ ಹೇಳಿಕೆಯಲ್ಲಿ 5 ನಿಮಿಷ ಮಾತ್ರ ವಾಲ್ಮೀಕಿ ನಿಗಮದ ಕುರಿತು ಮಾತನಾಡಿದ್ದಾರೆ. ಉಳಿದ ಅವಧಿಯಲ್ಲಿ ಸಂವಿಧಾನ ಎಂದರೇನು?, ಸಂವಿಧಾನದಲ್ಲಿ ಏನೇನಿದೆ? ಡಾ. ಅಂಬೇಡ್ಕರ್ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಕಳೆದ 2 ದಿನಗಳಿಂದ ಲೂಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಲೂಟಿ ಹೊಡೆದ ಬಗ್ಗೆ ಪ್ರಸ್ತಾವನೆಯೇ ಇಲ್ಲ ಎಂದು ದೂರಿದರು.