ದೆಹಲಿ,ಜು. 18(DaijiworldNews/AK):ಚಂಡೀಗಢ-ದಿಬ್ರುಗಢ ರೈಲು ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ ಪ್ರಧಾನಿ ಹೊಣೆಯಾಗಬೇಕು ಎಂದು ಹೇಳಿದ್ದಾರೆ.
ರೈಲು ಹಳಿ ತಪ್ಪಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು 60 ಮಂದಿ ಗಾಯಗೊಂಡಿದ್ದಾರೆ. ಯುಪಿಯಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್ಪ್ರೆಸ್ ಹಳಿತಪ್ಪಿರುವುದು ಮೋದಿ ಸರ್ಕಾರವು ರೈಲು ಸುರಕ್ಷತೆಯನ್ನು ಹೇಗೆ ವ್ಯವಸ್ಥಿತವಾಗಿ ಅಪಾಯಕ್ಕೆ ತಳ್ಳಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ದುಃಖತಪ್ತರ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪಗಳು. ಗಾಯಾಳುಗಳು ಗುಣಮುಖವಾಲಿ ಎಂದು ನಾವು ಪಾರ್ಥಿಸುತ್ತೇವೆ ಎಂದು ಖರ್ಗೆ ಎಕ್ಸ್ನಲ್ಲಿ ಬರೆದಿದ್ದಾರೆ.
ಒಂದು ತಿಂಗಳ ಹಿಂದೆ, ಸೀಲ್ದಾ-ಅಗರ್ತಲಾ ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು 11 ಜನರು ಪ್ರಾಣ ಕಳೆದುಕೊಂಡರು. ಸ್ವಯಂಚಾಲಿತ ಸಿಗ್ನಲ್ನ ವೈಫಲ್ಯ, ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಬಹು ಹಂತಗಳಲ್ಲಿನ ಲೋಪಗಳು ಮತ್ತು ಲೊಕೊ ಪೈಲಟ್ ಮತ್ತು ರೈಲು ವ್ಯವಸ್ಥಾಪಕರೊಂದಿಗೆ ವಾಕಿ-ಟಾಕಿಯಂತಹ ನಿರ್ಣಾಯಕ ಸುರಕ್ಷತಾ ಸಾಧನಗಳ ಲಭ್ಯತೆಯಿಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ.