ನವದೆಹಲಿ, ಜು. 18(DaijiworldNews/AK): 2024ನೇ ಸಾಲಿನ ನೀಟ್ ಯುಜಿ ಪರೀಕ್ಷಾ ಫಲಿತಾಂಶವನ್ನು ಜುಲೈ 20ರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಯಾವುದೇ ಕಾರಣಕ್ಕೂ ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸದೇ ನಗರವಾರು ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸುವಂತೆ ಎನ್ಟಿಎಗೆ ಆದೇಶಿಸಿದೆ.
ನೀಟ್-ಯುಜಿ (NEET-UG) ಮರುಪರೀಕ್ಷೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಡೆಸಿತು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೇ ಮಾತ್ರ ಮರುಪರೀಕ್ಷೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿತ್ತು.
ವಿಚಾರಣೆ ವೇಳೆ ಕೋರ್ಟ್ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಬಿಹಾರ ಪೊಲೀಸರಿಂದ ವರದಿ ಕೇಳಿತ್ತು. ಬಿಹಾರ ಪೊಲೀಸರು ಈ ಕೇಸ್ನಲ್ಲಿ ಮೊದಲ ಪ್ರಕರಣ ದಾಖಲಿಸಿದ್ದರು. ನಂತರ ಇದು ಜಾರ್ಖಂಡ್, ಗುಜರಾತ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ರಾಷ್ಟ್ರೀಯ ʻಸಾಲ್ವರ್ ಗ್ಯಾಂಗ್ʼ ನೊಂದಿಗೆ ಸಂಪರ್ಕ ಹೊಂದಿದೆ ಎಂಬುದು ಬೆಳಕಿಗೆ ಬಂದಿತ್ತು.