ಸಕಲೇಶಪುರ, ಜು. 17(DaijiworldNews/AA): ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಲೇ ಇದ್ದು, ಕೊಲ್ಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇಂದು ಮತ್ತೆ ಭೂ ಕುಸಿತ ಉಂಟಾಗಿದೆ.
ಭಾರೀ ಮಳೆಯಿಂದಾಗಿ ಕೊಲ್ಲಹಳ್ಳಿ ಬಳಿ ತಡೆಗೋಡೆ ಕುಸಿತ ಉಂಟಾಗಿದೆ. ಸುಮಾರು 25 ಅಡಿಗು ಅಧಿಕ ಪ್ರಮಾಣದ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈ ರಸ್ತೆಗೆ ಸೂಕ್ತ ತಡೆಗೋಡೆ ನಿರ್ಮಿಸದೆ ಇದ್ದ ಕಾರಣ ಮಣ್ಣು ಕೊಚ್ಚಿ ಹೋಗುತ್ತಿದೆ. 500 ಮೀಟರ್ ಉದ್ದಕ್ಕೆ ರಸ್ತೆಗೆ ಹೊಂದಿಕೊಂಡಿರುವ ತಡೆಗೋಡೆ ಕುಸಿಯುತ್ತಿದೆ. ಇನ್ನು ಮಳೆ ಅಧಿಕವಾದರೆ ಚತುಷ್ಪಥ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿನ್ನೆಯೂ ತಾಲೂಕಿನ ಗುಲಗಳಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿತ ಉಂಟಾಗಿತ್ತು. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕುಸಿತಗೊಳ್ಳುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.