ರಾಯಗಢ, ಜು 17 (DaijiworldNews/MS): ಕಳ್ಳನೋರ್ವ ಕದ್ದ ಮಾಲು ವಾಪಾಸ್ ತಂದಿಟ್ಟದ್ದಲ್ಲದೇ, ಪಶ್ಚಾತ್ತಾಪದಿಂದ ಗೋಡೆಗೆ ಪತ್ರವೊಂದನ್ನು ಅಂಟಿಸಿ ಹೋದ ಸ್ವಾರಸ್ಯಕರ ಘಟನೆಯೊಂದು ರಾಯಗಡ ಜಿಲ್ಲೆಯ ನೇರಲ್ ನಲ್ಲಿ ನಡೆದಿದೆ.
ತಾನು ಮನೆಕಳ್ಳತನ ನಡೆಸಿದ ಸೊತ್ತುಗಳು ಪ್ರಸಿದ್ಧ ಮರಾಠಿ ಸಾಹಿತಿ ಸೇರಿದ್ದು ಎಂದು ತಿಳಿದೊಡನೆ ಕಳ್ಳ ವಿಷಾದಗೊಂಡಿದ್ದಾರೆ. ಈ ಮನೆಯೂ ಆಗಸ್ಟ್ 16, 2010 ರಂದು ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದ ಪ್ರಮುಖ ಮರಾಠಿ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ನಾರಾಯಣ್ ಸುರ್ವೆ ಅವರಿಗೆ ಸೇರಿತ್ತು. ಸುರ್ವೆ ಅವರ ಕವಿತೆಗಳು ನಗರ ಕಾರ್ಮಿಕ ವರ್ಗದ ಸವಾಲುಗಳನ್ನು ಹೆಚ್ಚಾಗಿ ಚಿತ್ರಿಸುತ್ತಿತ್ತು
ಈ ಮನೆಯಲ್ಲಿ ಸುರ್ವೆ ಅವರ ಪುತ್ರಿ ಸುಜಾತಾ ಮತ್ತು ಅವರ ಪತಿ ಗಣೇಶ್ ಘರೆ ವಾಸಿಸುತ್ತಿದ್ದು ಅವರು ತಮ್ಮ ಮಗನನ್ನು ನೋಡಲೆಂದು ಹತ್ತು ದಿನಗಳ ಕಾಲ ವಿರಾರ್ ಗೆ ತೆರಳಿದ್ದ ಕಾರಣ ಮನೆಗೆ ಬೀಗ ಹಾಕಲಾಗಿತ್ತು.
ಈ ವೇಳೆ ಕಳ್ಳನೋರ್ವ ಮನೆಯೊಳಗಿದ್ದ ಎಲ್ ಇಡಿ ಟಿವಿ ಸಹಿತ ಹಲವು ವಸ್ತುಗಳನ್ನು ಕದ್ದೊಯ್ದಿದ್ದಾನೆ. ಮರುದಿನ ಮತ್ತಷ್ಟು ಹೆಚ್ಚು ಕಳ್ಳತನ ನಡೆಸಲು ಬಂದಾಗ ಸುರ್ವೆ ಅವರ ಫೋಟೋ ಮತ್ತು ಸ್ಮರಣಿಕೆಯನ್ನು ಗಮನಿಸಿದ್ದಾನೆ. ವಿದ್ಯಾವಂತನಾಗಿದ್ದ ಕಳ್ಳ ಕವಿ ಸುರ್ವೆ ಅವರ ಪುಸ್ತಕಗಳನ್ನು ಓದಿದ್ದಾನೆ. ಬಳಿಕ ಪಶ್ಚಾತ್ತಾಪಟ್ಟು ಕದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಿದರು. ಅಂತಹ ಹೆಸರಾಂತ ಸಾಹಿತಿಯ ಮನೆಯಿಂದ ಕಳ್ಳತನ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತಾ ಅವರು ಗೋಡೆಯ ಮೇಲೆ ಪತ್ರವೊಂದನ್ನು ಅಂಟಿಸಿಹೋಗಿದ್ದಾನೆ.
ಸುಜಾತಾ ಮತ್ತು ಅವರ ಪತಿ ಭಾನುವಾರ ವಿರಾರ್ನಿಂದ ಹಿಂದಿರುಗಿದ ನಂತರ ಪತ್ರ ನೋಡಿ ದಂಗಾಗಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ ಎಂದು ನೇರಲ್ ಪೊಲೀಸ್ ಇನ್ಸ್ಪೆಕ್ಟರ್ ಶಿವಾಜಿ ಧಾವ್ಲೆ ತಿಳಿಸಿದ್ದಾರೆ.
ಟಿವಿಯಲ್ಲಿ ಕಂಡುಬಂದಿರುವ ಫಿಂಗರ್ಪ್ರಿಂಟ್ ಆಧಾರಿಸಿ ಕಳ್ಳನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಹಿತಿ ಹಿನ್ನಲೆ
ಸುರ್ವೆ ಅವರು ಮುಂಬೈನ ಬೀದಿಗಳಲ್ಲಿ ಅನಾಥರಾಗಿ ಬೆಳೆದವರು. ಮನೆಗೆಲಸ, ಪಾತ್ರೆ ತೊಳೆಯುವವ, ಶಿಶುಪಾಲಕ, ಸಾಕು-ನಾಯಿ ಆರೈಕೆ ಮಾಡುವ ಪಾಲಕನಾಗಿ, ಹಾಲು ವಿತರಣಾ ಹುಡುಗನಾಗಿ, ಗಿರಣಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಾ ಸಾಹಿತ್ಯದ ಗೀಳು ಬೆಳೆಸಿಕೊಂಡವರಾಗಿದ್ದರು.