ಬೆಂಗಳೂರು, ಜು 16(DaijiworldNews/ AK): ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ ಬಗ್ಗೆ ಚರ್ಚೆ ಮಾಡುವ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಹೆಚ್.ಡಿ.ರೇವಣ್ಣ ಮೇಲಿನ ದೂರು ಪ್ರಕರಣ ಪ್ರಸ್ತಾಪ ಮಾಡಿದರು. ಈ ವೇಳೆ ಸದನದಲ್ಲಿ ರೇವಣ್ಣ ಭಾವೋದ್ವೇಗಕ್ಕೊಳಗಾದರು.
ಆರ್.ಅಶೋಕ್ ಅವರು ಮಾತಾಡುವಾಗ, ಹಾಸನ ಪ್ರಕರಣಗಳಲ್ಲಿ ಎಸ್ಐಟಿಯವರ ನಡೆ ರೇವಣ್ಣ, ಭವಾನಿ ಹಾಗೂ ಪ್ರೀತಂ ಗೌಡ ವಿಚಾರದಲ್ಲಿ ಸರಿಯಿರಲಿಲ್ಲ. ರೇವಣ್ಣಗೆ ಬೇಲ್ ಪಡೆಯಲು ಅವಕಾಶ ಕೊಡದೇ ಅರೆಸ್ಟ್ ಮಾಡಿದರು. ಆದರೆ ನಾಗೇಂದ್ರರನ್ನು ಎಸ್ಐಟಿಯವರು ಬಂಧಿಸಲಿಲ್ಲ. ವಾಲ್ಮೀಕಿ ಪ್ರಕರಣದಲ್ಲಿ ಎಸ್ಐಟಿ ವಿಫಲ ಆಗಿದೆ. ಎಸ್ಐಟಿಯಲ್ಲಿ ನಾಗೇಂದ್ರಗೆ ಒಂದು ಕಾನೂನು, ರೇವಣ್ಣಗೆ ಒಂದು ಕಾನೂನಾ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಹೆಚ್.ಡಿ.ರೇವಣ್ಣ ಮಧ್ಯಪ್ರವೇಶ ಮಾಡಿ, ನನ್ನ ಹೆಸರು ಹೇಳಿದ್ದಾರೆ. ನನಗೆ ಮಾತಾಡಲು ಅವಕಾಶ ಬೇಕು. ನಾವು ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ, ಬೇಡ ಅನ್ನಲ್ಲ. ನಲವತ್ತು ವರ್ಷ ರಾಜಕೀಯ ಜೀವನದಲ್ಲಿದ್ದೀನಿ. ಯಾರೋ ಹೆಣ್ಮಗಳನ್ನ ಕರೆತಂದು ಡಿಜಿ ಕಚೇರಿಯಲ್ಲಿ ದೂರು ಕೊಡಿಸುತ್ತಾರೆ. ಡಿಜಿ ಆದವನು ದೂರು ಬರೆದುಕೊಳ್ಳುತ್ತಾನೆ ಎಂದರೆ ಆತ ಡಿಜಿ ಆಗಲು ಅನ್ಫಿಟ್ ಎಂದು ಸದನದಲ್ಲಿ ಡಿಜಿ ವಿರುದ್ಧ ರೇವಣ್ಣ ಕಿಡಿಕಾರಿದರು.
ಈ ವೇಳೆ ರೇವಣ್ಣ ಅವರ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಡಿಕೆಶಿ ಎದ್ದು ನಿಂತು, ರೇವಣ್ಣಗೆ ಅನ್ಯಾಯ ಆಗಿದ್ರೆ ಚರ್ಚೆ ಮಾಡೋಣ ಪಾಪ. ರೇವಣ್ಣ ಚರ್ಚೆಗೆ ನೋಟಿಸ್ ಕೊಡಲಿ ಎಂದರು. ಇದಕ್ಕೆ, ಅವಕಾಶ ಕೊಡೋಣ ಎಂದು ಸ್ಪೀಕರ್ ಹೇಳಿದರು.