ಬೆಂಗಳೂರು, ಜು 15(DaijiworldNews/ AK): ರಾಜ್ಯ ಸರಕಾರದ ಕೆಲವರ ಬೆದರಿಕೆ ಮತ್ತು ಒತ್ತಡವೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿಯನ್ನು ಹಗರಣಕ್ಕೆ ಬಳಸಿಕೊಂಡಿದ್ದಾರೆ. ಹಣವನ್ನು ಹೊರರಾಜ್ಯಕ್ಕೆ ಕಳುಹಿಸುವ ಕೆಲಸ ಮಾಡಿದ್ದಾರೆ. ಇದು ಕೇವಲ ಹಗರಣವಲ್ಲ; ಇದು ಅಕ್ಷಮ್ಯ ಅಪರಾಧ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಅಲ್ಲದೆ, ಮಾನ್ಯ ಮುಖ್ಯಮಂತ್ರಿಗಳು ಹಣಕಾಸಿನ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾನ್ಯ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ರಾಜ್ಯದ ಜನರ ಪರವಾಗಿ ಒತ್ತಾಯವನ್ನು ಸದನದ ಮುಂದಿಟ್ಟರು.
ಯಾರೋ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರೆ ನಾನು ರಾಜೀನಾಮೆ ಕೊಡಬೇಕಾ ಎಂದು ಆಗ ಸಚಿವರೂ ಹೇಳಿಕೆ ನೀಡಿದ್ದರು. ಇನ್ನೊಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕೇವಲ ಅಧಿಕಾರಿಗಳು ಮಾತ್ರ ಒಳಗೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳೂ ಹೇಳಿಕೆ ನೀಡಿದ್ದರು ಎಂದು ಆಕ್ಷೇಪಿಸಿದರು.
ಯಾವುದೇ ಶಾಸಕರು, ಸಚಿವರು ಇದರಲ್ಲಿ ಇಲ್ಲ. ಕೇವಲ ಅಧಿಕಾರಿಗಳಿಂದ ಆದ ಹಗರಣ ಇದೆಂದು ಹೇಳಿಕೆ ನೀಡಿದ್ದು, ಅಕ್ಷಮ್ಯ ಅಪರಾಧ ಎಂದು ಸಭಾಧ್ಯಕ್ಷರ ಗಮನ ಸೆಳೆದರು.
ಈ ಸರಕಾರವು ಅಧಿಕಾರಕ್ಕೆ ಬಂದಾಗ ವಿರೋಧ ಪಕ್ಷ ಮಾತ್ರವಲ್ಲ; ರಾಜ್ಯದ ಜನತೆಯೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಿಂದ ರಾಜ್ಯ ಸರಕಾರವು ಶೋಷಿತ, ಪೀಡಿತ ಮತ್ತು ದಲಿತರ ಧ್ವನಿಯಾಗಿ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿಸಿದರು.
ಒಂದು ಕಡೆ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೊಂದೆಡೆ, 2022-23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರತಕ್ಕ ವಿವಿಧ ನಿಗಮಗಳ ಯೋಜನೆಗಳ ಅನುಷ್ಠಾನಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಆದ ಲೋಪಗಳ ಮಾಹಿತಿ ನೀಡಬಯಸುವುದಾಗಿ ಹೇಳಿದರು.
ಸಿಎಂ ವಿಫಲ..
ಇಷ್ಟು ದೊಡ್ಡ ಹಗರಣದ ಸಂದರ್ಭದಲ್ಲಿ ಅನುಭವಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನಡವಳಿಕೆಯನ್ನೂ ಜನರು ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಹೇಳಿದರು. ಮುಖ್ಯಮಂತ್ರಿಗಳು ಆರ್ಥಿಕ ಶಿಸ್ತು ರೂಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಅವರಿಗೆ ನಿಜವಾಗಿ ಕಾಳಜಿ ಇದ್ದರೆ, ದಲಿತರು, ಹಿಂದುಳಿದವರು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಈ ನಿಗಮದ ಹಣದ ವಿಚಾರದಲ್ಲಿ ಗಮನ ಕೊಡಬೇಕಿತ್ತು. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆ ಮಾಡುವುದನ್ನು ನೋಡಿಕೊಂಡು ಸುಮ್ಮನೇ ಕುಳಿತಿರುವುದೂ ಅಪರಾಧವೇ ಆಗಿದೆ. ಇದನ್ನು ರಾಜ್ಯದ ಮುಖ್ಯಮಂತ್ರಿಗಳು ತಿಳಿದುಕೊಳ್ಳಬೇಕು. ರಾಜ್ಯದ ಜನರು ದಲಿತ ಸಮುದಾಯಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕೆಂದು ಅಪೇಕ್ಷೆ ಇಟ್ಟುಕೊಂಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ದೋಚಿದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ; ಬೇರೆ ಬೇರೆ ಕಡೆ ದುರುಪಯೋಗ ಆಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.