ಬೆಂಗಳೂರು, ಜು. 16(DaijiworldNews/AA): ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಅಮಿತ್ ದಿಗ್ವೇಕರ್ ಅಲಿಯಾಸ್ ಅಮಿತ್ ಅಲಿಯಾಸ್ ಪ್ರದೀಪ್ ಮಹಾಜನ್, 7ನೇ ಆರೋಪಿ ಸುರೇಶ್ ಎಚ್.ಎಲ್ ಅಲಿಯಾಸ್ ಟೀಚರ್ ಮತ್ತು 17ನೇ ಆರೋಪಿ ಕೆ.ಟಿ ನವೀನ್ ಕುಮಾರ್ ಅಲಿಯಾಸ್ ನವೀನ್ಗೆ ಕೋರ್ಟ್ ಜಾಮೀನು ನೀಡಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಆರೋಪಿಗಳು ಕಳೆದ 6 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ಪ್ರಕರಣದ ವಿಚಾರಣೆ ಮುಗಿಯದೇ ದೀರ್ಘ ಕಾಲ ಜೈಲಿನಲ್ಲಿಡುವಂತಿಲ್ಲವೆಂದು ತೀರ್ಪು ಇರುವುದರಿಂದ ಷರತ್ತುಬದ್ಧ ಜಾಮೀನು ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
11ನೇ ಆರೋಪಿ ಮೋಹನ್ ನಾಯಕ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದ ಹಿನ್ನೆಲೆ ತಮಗೂ ಜಾಮೀನು ನೀಡಬೇಕೆಂದು ಅರ್ಜಿದಾರರ ವಾದವಾಗಿತ್ತು. ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 2ರಂದು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.