ಬೆಂಗಳೂರು, ಜು. 15(DaijiworldNews/AA): ಈ ಹಿಂದೆ ಸಿಇಟಿ ಪರೀಕ್ಷೆ ಇದ್ದಾಗ ನಮ್ಮ ಮಕ್ಕಳಿಗೆ ಹೆಚ್ಚು ಅನುಕೂಲ ಆಗ್ತಿತ್ತು. ನೀಟ್ ವ್ಯವಸ್ಥೆ ಫೆಲ್ಯೂರ್ ಸಿಸ್ಟಮ್. ಇದರಿಂದ ಮಕ್ಕಳಿಗೆ ಅನಾನುಕೂಲ ಎಂದು ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿ ದೊಡ್ಡ ಅವ್ಯವಹಾರವಾಗಿದೆ. ಪೇಪರ್ ಲೀಕ್ ಆಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಈ ಪರೀಕ್ಷೆಯಲ್ಲಿ ಸಾಮಾಜಿಕ ನ್ಯಾಯ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ನೀಟ್ ರದ್ದು ಮಾಡಬೇಕು. ತಮ್ಮದೇ ಪರೀಕ್ಷಾ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಐವನ್ ಡಿಸೋಜಾ ಅವರ ಹೇಳಿಕೆಗೆ ಸದನದಲ್ಲಿ ಉತ್ತರಿಸಿದ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಕೇಂದ್ರ ಸರ್ಕಾರ ಇದರಲ್ಲಿ ಎಡವಟ್ಟು ಮಾಡಿದೆ. ನೀಟ್ ಪರೀಕ್ಷೆ ಮಾಡೋದ್ರಲ್ಲಿ ಕೇಂದ್ರ ಎಡವಿದೆ. ಪೇಪರ್ ಲೀಕ್ ಆದಾಗ ನಾವು ತನಿಖೆ ಮಾಡಿ ಅಂತ ಆಗ್ರಹ ಮಾಡಿದ್ವಿ, ಕೇಂದ್ರ ಒಪ್ಪಲಿಲ್ಲ. ಬಳಿಕ ತಪ್ಪೊಪ್ಪಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದೇ 18ಕ್ಕೆ ವಿಚಾರಣೆಯಿದೆ. ಏನು ತೀರ್ಮಾನ ಆಗುತ್ತದೆಯೋ ನೋಡೋಣ ಎಂದು ಹೇಳಿದರು.
ನೀಟ್ ಪರೀಕ್ಷೆ ರದ್ದು ಮಾಡಲು ಸಾಧ್ಯವಿಲ್ಲ. ನೀಟ್ ವ್ಯವಸ್ಥೆ ಸುಪ್ರೀಂ ಕೋರ್ಟ್ ಆದೇಶದಿಂದ ಆಗಿದೆ. ಕೇಂದ್ರ ಸರ್ಕಾರ ಇದನ್ನ ಕಾಯ್ದೆ ತಂದು ಮಾಡಿದೆ. ಇದನ್ನ ರದ್ದು ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಬೇಕು. ಅಥವಾ ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು ಎಂದರು.