ಇಂಫಾಲ್, ಜು. 15(DaijiworldNews/AA): ಮಣಿಪುರದಲ್ಲಿ ಎಷ್ಟರಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಯೋಧನ ಹತ್ಯೆಯೇ ಸಾಕ್ಷಿ. ಕಳೆದ ಮೇ 3ರಂದು ಆರಂಭವಾದ ಹಿಂಸಾಚಾರ ಇಂದಿಗೂ ಮುಂದುವರೆದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾದ ಘಟನೆ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಹಿಂಸಾಚಾರದಿಂದಾಗಿ ಇಡೀ ಮಣಿಪುರ ರಾಜ್ಯವೇ ಛಿದ್ರಗೊಂಡಿದೆ. ಇಷ್ಟಾದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರ ನಿದ್ದೆಯಿಂದ ಎಚ್ಚರಗೊಳ್ಳುವುದು ಯಾವಾಗ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಪೋಸ್ಟ್ ಮಾಡಿದ್ದಾರೆ.
ಜುಲೈ 14 ರಂದು ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಹಾರ ಮೂಲದ ಯೋಧ ಅಜಯ್ ಕುಮಾರ್ ಮಿಶ್ರಾ (43) ಹುತಾತ್ಮರಾಗಿದ್ದರು.