ನವದೆಹಲಿ, ಜು. 14(DaijiworldNews/AA): ಕಳೆದ 4 ವರ್ಷಗಳಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮೂರು ಪ್ರಶ್ನೆಗಳನ್ನಿಟ್ಟಿದ್ದಾರೆ.
ಮೋದಿ ಅವರ ಹೇಳಿಯ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನರೇಂದ್ರ ಮೋದಿಜೀ ನಮಗೆ ಮೂರು ಪ್ರಶ್ನೆಗಳಿವೆ. ರಾಷ್ಟ್ರೀಯ ನೇಮಕಾತಿ ಏಜೆನ್ಸಿಯ ಕಳೆದ 4 ವರ್ಷಗಳಿಂದ ಒಂದೇ ಒಂದು ಪರೀಕ್ಷೆಯನ್ನೂ ನಡೆಸಿಲ್ಲ, ಏಕೆ? ಎನ್ಆರ್ಎಗೆ 1,517.57 ಕೋಟಿ ರೂ. ಹಣ ನೀಡಿದ್ದರೂ ಕಳೆದ ೪ ವರ್ಷಗಳಲ್ಲಿ ಕೇವಲ 58 ಕೋಟಿ ರೂ. ಮಾತ್ರ ಬಳಕೆಯಾಗಿದೆ ಏಕೆ? ಎಂದು ಪ್ರಶ್ನಿಸಿದ್ದಾರೆ.
ಎನ್ಆರ್ಎ ಅನ್ನು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಸಲು ಒಂದು ಸಂಸ್ಥೆಯಾಗಿ ರಚಿಸಲಾಗಿದೆ. ಆದ್ರೆ ಸರ್ಕಾರ ಎಸ್ ಸಿ, ಎಸ್ ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್ (ಆರ್ಥಿಕ ದುರ್ಬಲ ವರ್ಗ) ಯುವಜನರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಉದ್ದೇಶಪೂರ್ವಕವಾಗಿಯೇ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ನಿಷ್ಕ್ರಿಯಗೊಳಿಸಲಾಗಿದೆಯೇ? ಎಂದು ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸದ್ಯ ಈ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಬರೆದುಕೊಂಡಿದ್ದಾರೆ.
ಶನಿವಾರ ಮುಂಬೈನಲ್ಲಿ ಪ್ರಧಾನಿ ಮೋದಿ 29,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಆರ್ಬಿಐ ವರದಿ ಉಲ್ಲೇಖಿಸಿ ಮಾತನಾಡಿದ್ದರು. ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಖರ್ಗೆ ಖಂಡಿಸಿದ್ದಾರೆ.