ಬೆಂಗಳೂರು, ಜು. 14(DaijiworldNews/AA): ಪರಿಶಿಷ್ಟರ ನಿಧಿಗೆ ಕಾಂಗ್ರೆಸ್ ಕನ್ನಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪರಿಶಿಷ್ಟರ ಕಲ್ಯಾಣ 'ನಿಧಿ'ಯಡಿ 2014-15ರಿಂದ 2022-23ರ ಅವಧಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನಕ್ಕೆ ಕತ್ತರಿ ಹಾಕಿ ಅನ್ಯ ಯೋಜನೆಗಳಿಗೆ 15,553 ಕೋಟಿಗಳನ್ನು ಬಳಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿಜಯೇಂದ್ರ ಅವರು ಖಂಡಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಶೋಷಿತ ಸಮುದಾಯಗಳನ್ನು ನಿರಂತರ ವಂಚಿಸಿ ಅಧಿಕಾರ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಈ ಬಾರಿಯ ತನ್ನ ಆಡಳಿತದಲ್ಲಿ (ಮಹಮದ್ ಘಜನಿಯ ಮಾದರಿ) ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನಿಧಿಯಲ್ಲಿ 25,396 ಕೋಟಿಯನ್ನು ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಂಡಿರುವುದು ವರದಿಯಾಗಿದೆ, ಇದು ಸಾಮಾಜಿಕ ನ್ಯಾಯವ್ಯವಸ್ಥೆಯ ಮೂಲೋದ್ದೇಶದ ಅಸ್ತಿತ್ವವನ್ನು ಅಲುಗಾಡಿಸಲು ಹೊರಟ ದಲಿತ ದ್ರೋಹಿ ಕ್ರಮವಾಗಿದೆ ಎಂದು ಕಿಡಿ ಕಾರಿದ್ದಾರೆ.
ಸದ್ಯ ಈಗಾಗಲೇ ಎಸ್.ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿಹೊಡೆದ ಕಾಂಗ್ರೆಸ್ ಸರ್ಕಾರ, ಇದೀಗ ದಲಿತರ ಶ್ರೇಯೋಭಿವೃದ್ಧಿಗೆ ಇದ್ದ ಹಣವನ್ನೆಲ್ಲ ಅನ್ಯ ಕಾರ್ಯಗಳಿಗೆ ಬಳಸಿ ಪರಿಶಿಷ್ಟ ಸಮುದಾಯದ ಕಲ್ಯಾಣ ಕಾರ್ಯಗಳಿಗೆ 'ಇತಿ ಶ್ರೀ' ಹಾಡಲು ಹೊರಟಿರುವ ಕ್ರಮವನ್ನು ಬಿಜೆಪಿ ಸಹಿಸುವ ಮಾತೇ ಇಲ್ಲ, ದಲಿತ ಪರ ದನಿ ಎತ್ತಿ ಸದನದ ಒಳಗೆ ಹೊರಗೆ ಹೋರಾಡುವ ಸಂಕಲ್ಪ ತೊಟ್ಟಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.