ದೆಹಲಿ, ಜು. 13(DaijiworldNews/AA): ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಅದರ "ದುರಹಂಕಾರ, ದುರಾಡಳಿತ ಮತ್ತು ನಕಾರಾತ್ಮಕ ರಾಜಕೀಯವೇ ಕಾರಣ ಎಂದು ಕೆಲ ಕಾಂಗ್ರೆಸ್ ನಾಯಕರು ತಿಳಿಸಿದ್ದು, ಇಂಡಿಯಾ ಒಕ್ಕೂಟದ ಗೆಲುವು ಶ್ಲಾಘಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ವಿಶ್ವಾಸಾರ್ಹತೆ ಕುಸಿಯುತ್ತಿರುವುದಕ್ಕೆ ಬಲವಾದ ಸಾಕ್ಷಿಯಾಗಿದೆ. ವಿಧಾನಸಭಾ ಉಪಚುನಾವಣೆಯ ಸಕಾರಾತ್ಮಕ ಫಲಿತಾಂಶಕ್ಕಾಗಿ ನಾವು ಸಾರ್ವಜನಿಕರ ಮುಂದೆ ತಲೆಬಾಗುತ್ತೇವೆ. ಅವರು ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೋ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
ಪ್ರತಿಕೂಲ ಸಂದರ್ಭಗಳಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಗಾಗಿ ನಾವು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳುತ್ತೇವೆ. ಬಿಜೆಪಿಯ ದುರಹಂಕಾರ, ದುರಾಡಳಿತ ಮತ್ತು ಋಣಾತ್ಮಕ ರಾಜಕಾರಣವನ್ನು ಜನತೆ ಈಗ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂಬುದನ್ನು ಈ ಗೆಲುವು ತೋರಿಸುತ್ತದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಏಳು ರಾಜ್ಯಗಳ ಉಪಚುನಾವಣೆ ಫಲಿತಾಂಶಗಳು ಬಿಜೆಪಿ ಹೆಣೆದಿರುವ 'ಭಯ ಮತ್ತು ಭ್ರಮೆಯ ಜಾಲವನ್ನು ಮುರಿಯಲಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ರೈತರು, ಯುವಕರು, ಕಾರ್ಮಿಕರು, ಉದ್ಯಮಿಗಳು ಮತ್ತು ಉದ್ಯೋಗಸ್ಥರು ಸೇರಿದಂತೆ ಪ್ರತಿಯೊಂದು ವರ್ಗವು ಸರ್ವಾಧಿಕಾರವನ್ನು ಸಂಪೂರ್ಣವಾಗಿ ನಾಶಮಾಡಿ ನ್ಯಾಯದ ಆಡಳಿತವನ್ನು ಸ್ಥಾಪಿಸಲು ಬಯಸುತ್ತದೆ. ಸಾರ್ವಜನಿಕರು ಈಗ ತಮ್ಮ ಜೀವನದ ಸುಧಾರಣೆ ಮತ್ತು ಸಂವಿಧಾನದ ರಕ್ಷಣೆಗಾಗಿ ಭಾರತದೊಂದಿಗೆ ಸಂಪೂರ್ಣವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.
7 ರಾಜ್ಯಗಳ 13 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಇಂಡಿಯಾ ಒಕ್ಕೂಟ 10 ವಿಧಾನಸಭಾ ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಎರಡು ಮತ್ತು ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.