ಮುಂಬೈ, ಜು. 13(DaijiworldNews/AA): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯೂ ತುರ್ತುಪರಿಸ್ಥಿತಿಯಂತೆಯೇ ಇದೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಇಂದಿರಾ ಗಾಂಧಿ ಅವರು ಘೋಷಣೆ ಮಾಡಿದ್ದ ತುರ್ತುಪರಿಸ್ಥಿತಿ ದಿನವನ್ನು ಸಂವಿಧಾನ ಹತ್ಯಾ ದಿನವನ್ನಾಗಿ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಾವುತ್ ಅವರು, ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯಾಗಿ 50 ವರ್ಷಗಳು ಕಳೆದಿವೆ. ಆದರೂ, ಬಿಜೆಪಿಯವರು ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದನ್ನು ಬಿಟ್ಟು, ತುರ್ತು ಪರಿಸ್ಥಿತಿಯತ್ತಲೇ ಗಮನ ಕೇಂದ್ರೀಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
'ಯಾರನ್ನು ಬೇಕಾದರೂ ಜೈಲಿಗೆ ಅಟ್ಟುವಂತಹ ಸ್ಥಿತಿ ಇದೆ. ಕೋರ್ಟ್ ಮೇಲೂ ಒತ್ತಡವಿದೆ. ಕೇಂದ್ರೀಯ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದೀರಿ. ನಿಮ್ಮ ವಿರೋಧಿಗಳನ್ನು ಜೈಲಿಗೆ ತಳ್ಳುತ್ತಿದ್ದೀರಿ. ಭ್ರಷ್ಟಾಚಾರ ಮತ್ತು ಅರಾಜಕತೆ ವಿಪರೀತವಾಗುತ್ತಿದೆ. ಚೀನಾ ಅತಿಕ್ರಮಣ ಮಾಡುತ್ತಿದೆ. ಈಗಿನ ಸ್ಥಿತಿಯೂ ಆಗಿನ ತುರ್ತುಪರಿಸ್ಥಿತಿಯಂತೆಯೇ ಇದೆ. ಇಂದಿರಾ ಗಾಂಧಿ ಅವರು ತುಂಬಾ ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡಿದ್ದರು ಎಂದು ತಿಳಿಸಿದರು.