ಬೆಂಗಳೂರು, ಜು. 13(DaijiworldNews/AA): ವಾಲ್ಮೀಕಿ ನಿಗಮದ ಕೋಟ್ಯಂತರ ರೂ. ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿತ್ತು. ಪ್ರಕರಣದಲ್ಲಿ ಇದ್ದಕ್ಕಿದ್ದಂತೆ ಇಡಿ ಪ್ರವೇಶ ಆಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ನಾಗೇಂದ್ರ ಬಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬಾರದು. ತನಿಖೆಗೆ ನಮ್ಮ ತಕರಾರಿಲ್ಲ. ಇಡಿಯವರು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಏನು ಮಾಹಿತಿ ಸಿಕ್ಕಿದೆಯೋ ಆ ಆಧಾರದಲ್ಲಿ ಬಂಧಿಸಿದ್ದಾರೆ. ಇದು ಕಾನೂನಿನ ಪ್ರಕಾರ ನಡೆಯುವ ಪ್ರಕ್ರಿಯೆ. ಆದರೆ ಇದನ್ನು ರಾಜಕೀಯವಾಗಿ ಬಳಸಬಾರದು ಎಂದು ತಿಳಿಸಿದರು.
ಇಡಿ ಬಂಧನದಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಶಾಸಕ ದದ್ದಲ್ ಬಗ್ಗೆ ಮಾತನಾಡಿದ ಅವರು, ನಮ್ಮ ಎಸ್ಐಟಿಯವರು ನಾಗೇಂದ್ರ, ದದ್ದಲ್ ಇಬ್ಬರನ್ನೂ ಕರೆದು ವಿಚಾರಣೆ ಮಾಡಿದ್ದಾರೆ. ಅಗತ್ಯ ಕಂಡುಬಂದರೆ ಮತ್ತೆ ಕರೆಯುತ್ತಾರೆ. ದದ್ದಲ್ ಅವರು ಎಲ್ಲಿಗೂ ತಪ್ಪಿಸಿಕೊಂಡು ಹೋಗಿಲ್ಲ. ಇಲ್ಲೇ ಎಲ್ಲೋ ಅವರ ಕುಟುಂಬದವರ ಜೊತೆ ಇದ್ದಾರೆ. ಶುಕ್ರವಾರವೂ ನಾನು ದದ್ದಲ್ ಬಗ್ಗೆ ಕೇಳಿದಾಗ ಅವರು ಇಲ್ಲೇ ಅವರ ಕುಟುಂಬದವರ ಜೊತೆ ಇದ್ದಾರೆ ಎಂದು ಹೇಳಿದ್ದಾರೆ. ಎಸ್ಐಟಿಯವರೇ ಬಂಧನ ಮಾಡಲಿ ಅಂತ ಸಿಐಡಿ ಕಚೇರಿಗೆ ದದ್ದಲ್ ಹೋಗಿದ್ದ ವಿಚಾರದ ಬಗ್ಗೆ ತಿಳಿದಿಲ್ಲ ಎಂದರು.