ಛತ್ತೀಸ್ ಗಢ, ಜು 13(DaijiworldNews/MS): UPSC ಪರೀಕ್ಷೆಯಲ್ಲಿ ಯಶಸ್ವಿಯಾಗುವ ಪ್ರತಿಯೊಬ್ಬ ಅಭ್ಯರ್ಥಿಯು ತನ್ನದೇ ಆದ ವಿಶೇಷ ಕಥೆಯನ್ನು ಹೊಂದಿರುತ್ತಾರೆ. ಈ ಪ್ರಯಾಣದಲ್ಲಿ ತಮ್ಮದೇ ಆದ ಸವಾಲುಗಳನ್ನು ದಾಟಿ ಬಂದಿರುತ್ತಾರೆ. ಇದೇ ರೀತಿ ಐಎಎಸ್ ಆದ ನಮ್ರತಾ ಜೈನ್ ಅವರ ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ.
IAS ಅಧಿಕಾರಿಯಾಗಿರುವ ನಮ್ರತಾ ಜೈನ್ ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯ ನಿವಾಸಿ. ಇವರು ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಚಿಕ್ಕಂದಿನಿಂದಲೂ ಐಎಎಸ್ ಆಗಬೇಕೆಂಬ ಕನಸು ಕಂಡವರು. ಈ ಪಯಣದಲ್ಲಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು.ನಮ್ರತಾ ಜೈನ್ ಅವರ ಹುಟ್ಟೂರು ದಾಂತೇವಾಡ ನಕ್ಸಲ್ ಪೀಡಿತ ಪ್ರದೇಶ. ಇಲ್ಲಿ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ. 2ಜಿ ಇಂಟರ್ನೆಟ್ ಇರುವ ಪ್ರದೇಶದಲ್ಲಿ ವಾಸಿಸುತ್ತಿರುವ ನಮ್ರತಾ ಜೈನ್ ಅವರು ಮಹಿಳಾ ಐಎಎಸ್ ಅಧಿಕಾರಿಯಾಗುವವರೆಗಿನ ಪ್ರಯಾಣವನ್ನು ಸಾಕಷ್ಟು ಕಷ್ಟಗಳೊಂದಿಗೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ, ಅವರ ತಾಯಿ ಅವರಿಗೆ ಬೆನ್ನೆಲುಬಾಗಿ ನಿಂತರು .
ಐಎಎಸ್ ನಮ್ರತಾ ಜೈನ್ ದಾಂತೇವಾಡದ ಕಾರ್ಲಿಯಲ್ಲಿರುವ ನಿರ್ಮಲ್ ನಿಕೇತನ ಶಾಲೆಯಲ್ಲಿ ತಮ್ಮ ಆರಂಭಿಕ ಅಧ್ಯಯನವನ್ನು ಮಾಡಿದರು. 10 ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರ ಕುಟುಂಬವು ಅವರನ್ನು ಓದಲು ದೂರದ ನಗರಗಳಿಗೆ ಕಳುಹಿಸಲು ನಿರಾಕರಿಸಿದ್ದರಿಂದ ಅವರಿಗೆ ಸ್ವಲ್ಪ ತೊಂದರೆಯಾಯಿತು.
ಆದರೆ, ಅವರ ತಾಯಿ ಕುಟುಂಬದವರ ಮನವೊಲಿಸಿ ಕೆಪಿಎಸ್ ಭಿಲಾಯ್ ಶಾಲೆಗೆ ಸೇರಿಸಿದ್ದಾರೆ. ಅಲ್ಲಿಂದ 12ನೇ ಪರೀಕ್ಷೆ ಪಾಸ್ ಆಗಿ ನಂತರ ಭಿಲಾಯ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಟೆಕ್ ಮಾಡಿದರು.ನಮ್ರತಾ 8ನೇ ತರಗತಿಯಲ್ಲಿದ್ದಾಗ ಅವರ ಶಾಲೆಯ ಯಾವುದೋ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಜಿಲ್ಲಾಧಿಕಾರಿ ಬಂದಿದ್ದರು. ಆಗ ಅವರ ತಂದೆ ಐಎಎಸ್ ಅಧಿಕಾರಿಯ ಅಧಿಕಾರದ ಬಗ್ಗೆ ಹೇಳಿದ್ದರು. ಅದೇ ಅವರಿಗೆ ಐಎಎಸ್ ಅಧಿಕಾರಿಯಾಗಲು ಸ್ಪೂರ್ತಿ ಆಯಿತು.
ನಮ್ರತಾ ಅವರ UPSC ಪರೀಕ್ಷೆಯ ತಯಾರಿಯ ಸಮಯದಲ್ಲಿ, ಅವರ ಇಬ್ಬರು ಚಿಕ್ಕಪ್ಪಂದಿರು 6 ತಿಂಗಳ ಅಂತರದಲ್ಲಿ ಹೃದಯಾಘಾತದಿಂದ ನಿಧನರಾದರು. ಇದರಿಂದ ಅವರು ತುಂಬಾ ಖಿನ್ನತೆಗೆ ಒಳಗಾದರು. ಚಿಕ್ಕಪ್ಪನ ಕನಸುಗಳನ್ನು ನನಸಾಗಿಸಲು ಎರಡು ಪಟ್ಟು ಕಠಿಣ ಪರಿಶ್ರಮದಿಂದ ತಯಾರಿ ಪ್ರಾರಂಭಿಸಿದರು.
ನಮ್ರತಾ ಜೈನ್ ಅವರು 2015 ರಲ್ಲಿ ಯುಪಿಎಸ್ ಸಿ ಪರೀಕ್ಷೆಗೆ ಮೊದಲ ಪ್ರಯತ್ನಿಸದರು, ಅದರಲ್ಲಿ ಅವರು ವಿಫಲರಾದರು. ನಂತರ 2016 ರಲ್ಲಿ, ಅವರು 99 ನೇ ರ್ಯಾಂಕ್ ಪಡೆಯುವ ಮೂಲಕ ಮಧ್ಯಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿಯಾದರು. ಆದರೆ ಅವರು ತಮ್ಮ ಕನಸ್ಸಿನೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅಂತಿಮವಾಗಿ, 2018 ರಲ್ಲಿ, ಅವರ ಶ್ರಮವು ಫಲ ನೀಡಿತು. 12 ನೇ ರ್ಯಾಂಕ್ ನೊಂದಿಗೆ IAS ಅಧಿಕಾರಿಯಾದರು.
IAS ನಮ್ರತಾ ಜೈನ್ ಅವರು 16 ಸೆಪ್ಟೆಂಬರ್ 2020 ರಂದು ಛತ್ತೀಸ್ ಗಢದ ಮಹಾಸಮುಂದ್ ಜಿಲ್ಲೆಯಲ್ಲಿ IPS ನಿಖಿಲ್ ರಖೇಚಾ ಅವರನ್ನು ವಿವಾಹವಾದರು.