ಬೆಂಗಳೂರು, ಜು. 13(DaijiworldNews/AA): ವಾಲ್ಮೀಕಿ ನಿಗಮದ ಕೋಟ್ಯಂತರ ರೂ. ಹಗರಣ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಹೆಚ್ಚಿನ ವಿಚಾರಣೆಗೆ 6 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಹೆಚ್ಚಿನ ವಿಚಾರಣೆಗಾಗಿ ಹಾಗೂ ಮಹಜರು ಹಿನ್ನೆಲೆ ಇಂದು ಬೆಳಗ್ಗೆ ನಾಗೇಂದ್ರ ಅವರನ್ನು ಯಲಹಂಕದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಜು.18 ರ ವರೆಗೆ ಇ.ಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಬಳಿಕ ನ್ಯಾಯಾಧೀಶರ ಮನೆಯಿಂದ ಶಾಂತಿನಗರದ ಇ.ಡಿ ಕಚೇರಿಗೆ ಆರೋಪಿಯನ್ನು ಇ.ಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರರನ್ನು ಇಡಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿದರು. ಆ ಬಳಿಕ ಅಧಿಕಾರಿಗಳು ನಾಗೇಂದ್ರರನ್ನು ಶುಕ್ರವಾರ ಬಂಧಿಸಿದರು. ನಂತರ ಶುಕ್ರವಾರ ರಾತ್ರಿ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಜುಲೈ 10ರಂದು ಇಡಿ ಮಾಜಿ ಸಚಿವ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಮಹತ್ವದ ದಾಖಲೆಗಳನ್ನು ಕಲೆ ಹಾಕಿತ್ತು. ಇವರಿಬ್ಬರ ಮನೆ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಹಾಗೂ ಅವರ ಪಿಎ ಹರೀಶ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.