ಮುಂಬೈ, ಜು 12(DaijiworldNews/ AK): ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ಬಿಜೆಪಿ-ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಮಿತ್ರಪಕ್ಷಗಳು 11 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಗೆದ್ದುಕೊಂಡಿವೆ.
274 ಸದಸ್ಯರ ಬಲದ ವಿಧಾನಸಭೆಯಿಂದ ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಪರಿಷತ್ನ 11 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸ್ಪರ್ಧಿಸಿದ್ದ 9 ಸ್ಥಾನಗಳಲ್ಲಿ ಗೆಲುವು ಕಂಡಿದೆ.
103 ಶಾಸಕರನ್ನು ಹೊಂದಿರುವ ಬಿಜೆಪಿಯ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಪಂಕಜಾ ಮುಂಡೆ ಪ್ರಮುಖರಾಗಿದ್ದಾರೆ. ಜೊತೆಗೆ ಶಿವಸೇನೆ ಶಿಂಧೆ ಬಣ ಹಾಗೂ ಎನ್ಸಿಪಿ ಅಜಿತ್ ಪವಾರ್ ನೇತೃತ್ವದ ತಲಾ ಒಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂಡಿಯಾ ಕೂಟದ ಕಾಂಗ್ರೆಸ್ ಒಂದು ಸ್ಥಾನ ಪಡೆದರೆ, ಯುಬಿಟಿ ಸಹ ಒಂದೇ ಒಂದು ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.