ಹರಿಯಾಣ, ಜು 12(DaijiworldNews/MS):UPSC ಸಿವಿಲ್ ಸರ್ವೀಸಸ್ ಪರೀಕ್ಷೆ ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದು. ಈ ಪರೀಕ್ಷೆಯನ್ನು ಭೇದಿಸಲು ಸ್ಪರ್ಧಿಗಳಿಗೆ ತೀವ್ರ ತಯಾರಿ ಅಗತ್ಯವಿದೆ. ಅನೇಕ ಸವಾಲುಗಳ ನಡುವೆಯೂ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಹಲವರು ಯಶಸ್ವಿಯಾಗುತ್ತಾರೆ. ಅದಕ್ಕೆ ಒಂದು ಅದ್ಭುತ ಉದಾಹರಣೆ ಹರಿಯಾಣದ ಗುರುಗ್ರಾಮ್ ನಿವಾಸಿ ನಿಧಿ ಸಿವಾಚ್.
ಹರಿಯಾಣದ ಗುರುಗ್ರಾಮ್ನಲ್ಲಿ ಜನಿಸಿದ ನಿಧಿ ಸಿವಾಚ್ ಶಾಲಾ ದಿನಗಳಿಂದಲೇ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದರು. ತನ್ನ 10ನೇ ಮತ್ತು 12ನೇ ಬೋರ್ಡ್ ಪರೀಕ್ಷೆಗಳಲ್ಲಿ ಅವರು 95% ಮತ್ತು 90% ಗಳಿಸಿದ್ದರು. ನಿಧಿ ಸಿವಾಚ್ ಹತ್ತನೇ ತರಗತಿ ಪಾಸಾದ ನಂತರ ಇಂಜಿನಿಯರಿಂಗ್ ಓದುವ ಮನಸ್ಸು ಮಾಡಿದ್ದರು. 12ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿಕೊಂಡರು. ಸೋನಿಪತ್ನಲ್ಲಿರುವ ದೀನಬಂಧು ಛೋಟುರಾಮ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ತಿಗೊಳಿಸಿದರು.
ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಮಗಳು ಕೆಲಸ ಬಿಟ್ಟು ಯುಪಿಎಸ್ಸಿಗೆ ತಯಾರಿ ನಡೆಸಬೇಕೆಂದ ನಿರ್ಧಾರ ಕುಟುಂಬಸ್ಥರಿಗೆ ಇಷ್ಟಇರಲಿಲ್ಲ. ಅಲ್ಲದೆ ಮೊದಲೆರಡು ಯತ್ನಗಳಲ್ಲಿ ಆಕೆ ವಿಫಲವಾದಾಗ ಪೋಷಕರು ತಾಳ್ಮೆ ಕಳೆದುಕೊಂಡು, ನಿಧಿ ಪ್ರಯತ್ನಕ್ಕೆ ಅಂತ್ಯವಾಡಲು ಬಯಸಿದರು. ಒಂದು ವೇಳೆ ಮೂರನೇ ಪ್ರಯತ್ನದಲ್ಲಿ ಸೆಲೆಕ್ಷನ್ ಆಗದಿದ್ದರೆ ಮದುವೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕುಟುಂಬ ಸದಸ್ಯರ ಒತ್ತಾಡವನ್ನು ನಿಧಿ ಸವಾಲಾಗಿ ತೆಗೆದುಕೊಂಡರು. ಅವರು ಮುಂದಿನ ಆರು ತಿಂಗಳ ಕಾಲ ತಮ್ಮನ್ನ ಕೋಣೆಯಲ್ಲಿ ಬಂಧಿಯಾಗಿಸಿಕೊಂಡು ಮಿಷನ್ UPSCಗೆ ಸಿದ್ಧತೆ ನಡೆಸಿದರು. ನಿಧಿಯ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿತು. 2018ರ ಯುಪಿಎಸ್ಸಿ ಪರೀಕ್ಷೆ ಬರೆದಾಗ ಅಖಿಲ ಭಾರತ 83ನೇ ಶ್ರೇಯಾಂಕ ಪಡೆದುಕೊಂಡರು.
ನಿಧಿ ಸಿವಾಚ್ UPSC ಪರೀಕ್ಷೆಗೆ ಯಾವುದೇ ಕೋಚಿಂಗ್ ಪಡೆದಿಲ್ಲ ಎನ್ನುವುದು ಮತ್ತೊಂದು ವಿಶೇಷ. ಸ್ವಯಂ ಅಧ್ಯಯನದ ಬಲದ ಮೇಲೆ ಮೂರನೇ ಪ್ರಯತ್ನದಲ್ಲಿ ಅವರು ಈ ಯಶಸ್ಸನ್ನು ಸಾಧಿಸಿದ್ದಾರೆ.