ನವದೆಹಲಿ, ಜು 11(DaijiworldNews/ AK): ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಿಂಗ್ಪಿನ್ ಎನ್ನಲಾದ ರಾಕೇಶ್ ರಂಜನ್ ಅಲಿಯಾಸ್ ರಾಕಿ ಎಂಬಾತನನ್ನು ಸಿಬಿಐ ಬಂಧಿಸಿದೆ.
ಆರೋಪಿ ರಂಜನ್ನನ್ನು 10 ದಿನಗಳ ಕಾಲ ಏಜೆನ್ಸಿ ಕಸ್ಟಡಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಬಿಹಾರದ ಪಾಟ್ನಾ ಬಳಿ ಎರಡು ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ ಬಳಿ ಎರಡು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಾಕಿಯನ್ನು ಹೊರತುಪಡಿಸಿ ಎಂಟು ಜನರನ್ನು ಬಂಧಿಸಿದೆ.
ಜಾರ್ಖಂಡ್ನ ಹಜಾರಿಬಾಗ್ನ ಶಾಲೆಯೊಂದರ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರು ಸೇರಿದಂತೆ ಹನ್ನೆರಡು ಜನರನ್ನು ಇದುವರೆಗೆ ಬಂಧಿಸಲಾಗಿದೆ. ವಿವಿಧ ರಾಜ್ಯ ಪೊಲೀಸ್ ಪಡೆಗಳು ಮತ್ತು ಸಿಬಿಐ, ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಂತಹ ರಾಷ್ಟ್ರೀಯ ದಂಧೆಗಳ ಬಗ್ಗೆ ತನಿಖೆ ನಡೆಸುತ್ತಿವೆ.
ರಾಷ್ಟ್ರವ್ಯಾಪಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯ ತನಿಖೆಯ ಕಾರ್ಯವನ್ನು ಸಿಬಿಐ ವಹಿಸಿಕೊಂಡಿದ್ದು, ಬಿಹಾರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಿಗೆ ಆರು ಎಫ್ಐಆರ್ಗಳನ್ನು ದಾಖಲಿಸಿದೆ. ನೀಟ್ ಪೇಪರ್ ಸೋರಿಕೆ ಮೂಲ ಹಜಾರಿಬಾಗ್ ಶಾಲೆ. ಅಲ್ಲಿಂದ ಸೋರಿಕೆಯಾದ ಪೇಪರ್ಗಳು ಬಿಹಾರಕ್ಕೂ ಬಂದಿವೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.