ಕೊಪ್ಪಳ,ಜು 11(DaijiworldNews/ AK): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗೆ 60 ರಿಂದ 65 ಸಾವಿರ ಕೋಟಿ ಹಣ ಬೇಕು. ಇದರಿಂದ ಬೇರೆ ಯೋಜನೆಗಳಿಗೆ ಅನುದಾನ ಇಲ್ಲ. ಯಾವಾಗಲೂ ಸಿಎಂ ಜೊತೆಗೆ ಇರುವ ನನಗೆ ಮಾತ್ರ ಒಳಗಿನ ಸಮಸ್ಯೆ ಗೊತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದದಲ್ಲಿ ರೈತರು ಮತ್ತು ಗ್ರಾಮಸ್ಥರ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿ, ಹಣಕಾಸಿನ ಕೊರತೆಯಿಂದ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ನಾನು ಕೆರೆ ತುಂಬಿಸುವ ಯೋಜನೆಗೆ ಬರೋಬ್ಬರಿ 970 ಕೋಟಿ ರೂ. ಅನುದಾನ ತಂದಿದ್ದೇನೆ. ರಾಜ್ಯದ ಯಾವುದೇ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ತುಂಬಾ ಕ್ಷೇತ್ರದ ಶಾಸಕರು ಅಭಿವೃದ್ಧಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ, ಸಿಎಂ ಯಾರಿಗೂ ಅನುದಾನ ನೀಡಿಲ್ಲ ಎಂದು ಹೇಳಿದರು.
ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತುಂಬಾ ಕಷ್ಟ ಆಗುತ್ತಿದೆ. ಸಿಎಂ ನನ್ನನ್ನು ತಮ್ಮ ಆರ್ಥಿಕ ಸಲಹೆಗಾರನಾಗಿ ಮಾಡಿಕೊಂಡಿದ್ದಾರೆ. ದಿನನಿತ್ಯ ಅವರ ಜೊತೆಯಲ್ಲೇ ಇರುವುದರಿಂದ ನನ್ನ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ. ರಾಜ್ಯದಲ್ಲಿ ಇದು ಒಂದೇ ಕೆಲಸ ಆಗುತ್ತಿದೆ. ಹಣಕಾಸಿನ ಆಂತರಿಕ ವಿಚಾರ, ನನಗೆ ಮಾತ್ರ ಗೊತ್ತಿದೆ. ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.