ನವದೆಹಲಿ, ಜು 11(DaijiworldNews/ AK):ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಅವರು, ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ಶಾಮೀಲಾಗಿದೆ ಎನ್ನಲಾಗಿದೆ. ಯೂನಿಯನ್ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳ ಪಾತ್ರದ ತನಿಖೆಯಾಗಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ಮಾಡಿಸಿ ಹಗರಣದಲ್ಲಿ ಭಾಗಿಯಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಬೇಕು. ಅವರ ಕುಟುಂಬಕ್ಕೆ ನೆರವು ಖಾತ್ರಿಪಡಿಸಬೇಕು. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಕ್ರಮವಹಿಸಬೇಕು. ಸರ್ಕಾರದ ವಿವಿಧ ಅಭಿವೃದ್ಧಿ ನಿಧಿಗಳ ಮೇಲ್ವಿಚಾರಣೆ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಬಹುಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ನಾಗೇಂದ್ರ ವಿರುದ್ಧ ಆರೋಪ ಕೇಳಿಬಂದಿದೆ. ಪರಿಣಾಮವಾಗಿ ಅವರು ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು. ಜೊತೆಗೆ ನಿಗಮದ ಅಧ್ಯಕ್ಷರಾದ, ಶಾಸಕ ಬಸನಗೌಡ ದದ್ದಲ್ ವಿರುದ್ಧವೂ ಆರೋಪವಿದೆ.