ಬೆಂಗಳೂರು, ಜು 11(DaijiworldNews/ AK): ಪರಿಶಿಷ್ಟ ಜಾತಿ- ಪಂಗಡದ ಉಪ ಯೋಜನೆಗೆ (SCSP-TSP) ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ ರೇವಣ್ಣ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಇಪಿ-ಟಿಎಸ್ಪಿ ಹಣವನ್ನು ಸಿದ್ದರಾಮಯ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲೂ ದಲಿತ ಫಲಾನುಭವಿಗಳು ಇದ್ದಾರೆ. ಹೀಗಾಗಿ ಎಸ್ಇಪಿ-ಟಿಎಸ್ಪಿ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ. ಹಣ ದುರುಪಯೋಗ ಆದಾಗ ನಾವು ಪರಿಶೀಲನೆ ಮಾಡುತ್ತೇವೆ ಎಂದರು.
ಪರಿಶಿಷ್ಟ ಪಂಗಡ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಅವರು, ನೋಟಿಸ್ ಕೊಟ್ಟಿರುವುದು ಬೇರೆ ಕಾರಣಕ್ಕೆ. ಅವರು ಕೊಟ್ಟ ನೋಟಿಸ್ಗೆ ಸರಿಯಾದ ಉತ್ತರ ನೀಡುತ್ತೇವೆ ಎಂದರು.
ದಲಿತರ ಹಣ ಗ್ಯಾರಂಟಿಗೆ ಬಳಸಿಕೊಂಡಿದ್ದನ್ನು ಬಿಜೆಪಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ದವಾಗಿರುವ ವಿಚಾರವಾಗಿ ಮಾತನಾಡಿದ ಅವರು, ಇದು ಅವರ ಕೆಲಸ. ನಾನು ಕೂಡ ಇದನ್ನೇ ಮಾಡಿದ್ದು. ಅಲ್ಲಿ ನಾವು ಉತ್ತರ ನೀಡುತ್ತೇವೆ. ಬಿಜೆಪಿಯವರು ಕೇಳುತ್ತಾರೆ ಅಂತ ಹೆದರಿಕೊಳ್ಳಲು ಆಗುತ್ತಾ? ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರ ಪಂಚ ಯೋಜನೆಗಳಿಗೆ ಹಣ ಹೊಂದಿಸಲು ಕಸರತ್ತು ನಡೆಸಿದೆ. ಹೀಗಾಗಿ 2024-25ನೇ ಹಣಕಾಸು ವರ್ಷಕ್ಕಾಗಿ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ ಮೀಸಲಿಟ್ಟಿದ್ದ 39,171 ಕೋಟಿ ರೂ. ಅನುದಾನದಲ್ಲಿ 14,282 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.