ಚಿತ್ರದುರ್ಗ, ಜು. 10(DaijiworldNews/AA): ಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದ್ರೆ ಹೇಗೆ..? ಬೇಲಿಯೇ ಎದ್ದು ಹೊಲ ಮೇದಂತೆ ಆಗಬಾರದು ಹಗರಣದಲ್ಲಿರುವವರು ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಅವರು ಮುಡಾ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಮನೆ ಕಟ್ಟಿಕೊಳ್ಳಲು ನಮ್ಮ ಹಿಂದಿನ ಸರಕಾರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿತ್ತು. ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಆದರೆ ಆ ಉದ್ದೇಶ ಮರೆತು ಅಧಿಕಾರಿಗಳು, ಇನ್ನುಳಿದವರು ಸೇರಿ ಹಗರಣ ಮಾಡ್ತಿದ್ದಾರೆ ಆದರೆ ಇದು ತಪ್ಪು ಯಾವುದೇ ಸರಕಾರ ಹಗರಣ ನಡೆಸಿದ್ರೂ ತನಿಖೆ ನಡೆಸಬೇಕು ಜೊತೆಗೆ ನಿವೃತ್ತ ನ್ಯಾಯಾಧೀಶರ ಕಮೀಶನ್ ನೇಮಕ ಮಾಡಬೇಕು ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ತನಿಖೆ ಆಗಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಬಿ. ನಾಗೇಂದ್ರ ನಿವಾಸದ ಮೇಲೆ ಇಡಿ ದಾಳಿ ಕುರಿತು ಸಚಿವ ಶರಣಪ್ರಕಾಶ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶರಣಪ್ರಕಾಶ ಪಾಟೀಲ್ ಕಾನೂನು ತಜ್ಞರಿರಬಹುದು ಆದರೆ ನಮಗೆ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತೆ, ನಮ್ಮ ಮೇಲೆ ಆಪಾದನೆ ಬಂದಾಗ ನಮಗೆ ರೋಲ್ ಮಾಡೆಲ್ ಆಗಿದ್ದವರು ರಾಮಕೃಷ್ಣ ಹೆಗಡೆಯವರು. ಟೆಲಿಫೋನ್ ಕದ್ದಾಲಿಗೆ ಆರೋಪ ಬಂದಾಗ ರಾಜೀನಾಮೆ ನೀಡಿದ್ರು. ರೈಲ್ವೆ ಅಪಘಾತವಾದಾಗ ಕೇಂದ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದರು. ವಾಲ್ಮೀಕಿ ನಿಗಮದ ಹಗರಣ ಸಣ್ಣ ಹಗರಣ ಅಲ್ಲ ಸರಕಾರಿ ಖಜಾನೆಯ ಹಗಲು ದರೋಡೆ, ಇಡೀ ಸರಕಾರವೇ ಜವಾಬ್ದಾರಿ ಹೊತ್ತು ರಾಜಿನಾಮೆ ನೀಡಬೇಕು
ಎಂದು ಹೇಳಿದರು.