ಬೆಂಗಳೂರು, ಜು. 09(DaijiworldNews/AA): ಮಕ್ಕಳನ್ನು ಎಲ್ಕೆಜಿ, ಯುಕೆಜಿ ಹಾಗೂ 1ನೇ ತರಗತಿಗೆ ದಾಖಲಿಸಲು ಈಗಾಗಲೇ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಿದ ರಾಜ್ಯ ಸರ್ಕಾರವು ಇದೀಗ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ.
ಮಕ್ಕಳ ಎಲ್ಕೆಜಿ ಪ್ರವೇಶಾತಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ನಿಗದಿಪಡಿಸಲಾಗಿದೆ. ಯುಕೆಜಿ ಪ್ರವೇಶಾತಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಗರಿಷ್ಠ ವಯೋಮಿತಿಯು 7 ವರ್ಷ ಆಗಿದೆ. ಜೊತೆಗೆ ಒಂದನೇ ತರಗತಿ ಪ್ರವೇಶಾತಿಗೆ ಕನಿಷ್ಠ ವಯೋಮಿತಿ 6 ವರ್ಷ ಇದ್ದರೆ, ಗರಿಷ್ಠ ವಯೋಮಿತಿ 8 ವರ್ಷ ನಿಗದಿಪಡಿಸಲಾಗಿದೆ.
ಸರ್ಕಾರವು ಈ ಹೊಸ ಆದೇಶವನ್ನು ಡ್ರಾಪ್ಔಟ್ ಆಗುವ ಮಕ್ಕಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಹೊರಡಿಸಿದೆ. ಈ ಹೊಸ ಆದೇಶವು ಎಲ್ಕೆಜಿಗೆ 2023-24, ಯುಕೆಜಿಗೆ 2024-25 ಹಾಗೂ ಒಂದನೇ ತರಗತಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ 1ನೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿತ್ತು. ಆದ್ದರಿಂದ ಈ ಶೈಕ್ಷಣಿಕ ಸಾಲಿನಿಂದಲೇ ಎಲ್ಕೆಜಿ ತರಗತಿಗೆ ದಾಖಲಿಸಿಕೊಳ್ಳಲು ಜೂನ್ 01ನೇ ತಾರೀಖಿಗೆ ಅನ್ವಯವಾಗುವಂತೆ 4 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್ ಒಂದನೇ ತಾರೀಖಿಗೆ ಅನ್ವಯವಾಗುವಂತೆ 6 ವರ್ಷ ತುಂಬಿರಲೇಬೇಕು ಎಂದು ಕಳೆದ ವರ್ಷ ಜುಲೈ ನಲ್ಲಿ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತು. ಆದರೆ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿತ್ತು.