ಬೆಂಗಳೂರು, ಜು. 09(DaijiworldNews/AA): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನೀಡಲಾಗುತ್ತದೆ ಎಂದು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮುಡಾದ ಅನುಕೂಲ ಪಡೆದು ಸಿದ್ದರಾಮಯ್ಯ ಸೈಟ್ ಪಡೆದಿದ್ದಾರೆ. ಸಿಎಂ ಆಗಿ, ವಿಪಕ್ಷ ನಾಯಕನಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಜುಲೈ 12ರಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಇನ್ನು ಅವರು ಈ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಹಾಕಿಕೊಳ್ಳಲು ರೆಡಿಯಾಗಿದ್ದಾರೆ. ಕೆಂಪಣ್ಣ ಆಯೋಗ ಏನು ಆಯ್ತು?, ರೀಡೂ ಹಗರಣದಲ್ಲಿ ಏನಾಯ್ತು ಎಂದು ನಿಮಗೆ ಗೊತ್ತಲ್ಲವೇ? ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರೇ ಎಲ್ಲಿದ್ದೀರಾ? ನಿಮ್ಮ ಅಧಿಕಾರಿಗಳು, ಸಚಿವರು ಭ್ರಷ್ಟಾಚಾರದಲ್ಲೇ ತೊಡಗಿದ್ದಾರೆ. ಜೊತೆಗೆ ಹೆಲಿಕಾಪ್ಟರ್ ನಲ್ಲೇ ಹೋಗಿ ಫೈಲ್ ತಂದಿದ್ದಾರೆ. ನಿಮ್ಮ ಭಂಡತನ, ಹಗಲು ದರೋಡೆ ಕಂಡು ಬಂದಿದೆ ಎಂದು ಕಿಡಿಕಾರಿದರು.