ಒಡಿಶಾ, ಜು.08(DaijiworldNews/AK): ಒಡಿಶಾದ ಪುರಿಯಲ್ಲಿ ಭಾನುವಾರ ನಡೆದ ಐತಿಹಾಸಿಕ ಜಗನ್ನಾಥ ರಥಯಾತ್ರೆ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ಭಕ್ತರೊಬ್ಬರು ಮೃತಪಟ್ಟಿದ್ದು, 300 ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಗಾಯಗಳಾಗಿರುವುದಾಗಿ ವರದಿ ಆಗಿದೆ.
ಘಟನೆ ಬಳಿಕ ಭಕ್ತನನ್ನು ತಕ್ಷಣವೇ ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅಷ್ಟರಲ್ಲಿ ಪ್ರಾಣ ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮೃತ ಭಕ್ತ ಯಾರೆಂದು ತಿಳಿದುಬಂದಿಲ್ಲ. ಸದ್ಯ ಗಾಯಾಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂದಿನಿಂದ ಎರಡು ದಿನ ನಡೆಯುವ ಭಗವಾನ್ ಜಗನ್ನಾಥ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ.
300ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಸುಮಾರು 50 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಭಗವಾನ್ ಜಗನ್ನಾಥನ ಭವ್ಯ ರಥಯಾತ್ರೆ ಭಾನುವಾರ ಆರಂಭಗೊಂಡಿದ್ದು, ಪದಿ ಮುರ್ಮು ಅವರು ಚಾಲನೆ ನೀಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುವ ಮೂಲಕ ಈ ಯಾತ್ರೆಗೆ ಸಾಕ್ಷಿಯಾಗುತ್ತಾರೆ. ಈ ರಥಯಾತ್ರೆಯೂ ಎರಡು ದಿನ ನಡೆಯಲಿದ್ದು, 53 ವರ್ಷಗಳ ಬಳಿಕ ಮೊದಲ ಬಾರಿಗೆ ರಥಯಾತ್ರೆಯು ಎರಡು ದಿನಗಳವರೆಗೆ ನಡೆಯುತ್ತಿರುವುದು ವಿಶೇಷ.