ನಾಗ್ಪುರ, ಜು. 07(DaijiworldNews/AA): ಬಿಜೆಪಿ ನೇತೃತ್ವದ ಎನ್ಡಿಎ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಅವರು ಕಾಂಗ್ರೆಸ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2004ರಿಂದ 2014ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ದೇಶದ ಜನರಿಗೆ ಅರಿವಿದೆ. ಕಾಂಗ್ರೆಸ್ ಆಡಳಿತದಲ್ಲಿ ನಡೆದಿದ್ದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟ (ಸಿಡಬ್ಲುಜಿ) ಹಗರಣ, ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಗಳನ್ನು ನೋಡಿದ್ದೇವೆ. ಜೊತೆಗೆ ಕಮಿಷನ್ ಮತ್ತು ಭ್ರಷ್ಟಾಚಾರ ಆರೋಪಗಳನ್ನು ವ್ಯಾಪಕವಾಗಿ ಕೇಳಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಜುಲೈ 12ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಮಹಾಯುತಿ (ಎನ್ಡಿಎ) ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟರ ನಾಯಕರಿದ್ದಂತೆ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷ ನಾನಾ ಪಟೋಲೆ ಇತ್ತೀಚೆಗೆ ಆರೋಪಿಸಿದ್ದರು.