ನವದೆಹಲಿ, ಜು. 07(DaijiworldNews/AA): ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತ ಸೋತ ಬಗ್ಗೆ ಶಶಿ ತರೂರ್ ಮಾಡಿದ ಹೇಳಿಕೆ ಕುರಿತು ಬಿಜೆಪಿ ತಿರುಗೇಟು ನೀಡಿದೆ.
ಭಾರತದ ಸೋಲಿನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾವು ಮುಂಬೈಯಲ್ಲಿ ಹುಚ್ಚುತನದಿಂದ ಸಂಭ್ರಮಾಚರಣೆ ಆಚರಿಸಿತ್ತು. ಈ ಸಂಭ್ರಮ ಮುಗಿಯುವ ಮುನ್ನವೇ ಹರಾರೆಯಲ್ಲಿ ಜಿಂಬಾಬ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಸೋಲು ಕಂಡಿದ್ದೇವೆ. ಇದನ್ನು ಗಮನಿಸಿದರೆ ಬಿಸಿಸಿಐ ಎದುರಾಳಿ ತಂಡಗಳನ್ನು ಲಘುವಾಗಿ ಪರಿಗಣಿಸಿದೆ ಎಂಬುದು ಸ್ಪಷ್ಟ. ಜೂನ್ 4ರಂದು ಅಥವಾ ಜುಲೈ 6ರಂದು ದುರಹಂಕಾರವನ್ನು ಒಂದು ಹಂತಕ್ಕೆ ಇಳಿಸಲಾಗಿದೆ. ಜಿಂಬಾಬ್ ಉತ್ತಮ ಆಟವಾಡಿದೆ. ಜಿಂಬಾಬ್ಬೆ ವಿರುದ್ಧ ಟಿ20 ಕ್ರಿಕೆಟ್ ಸರಣಿಗೆ ಅನುಭವಿ ಆಟಗಾರರಿಲ್ಲದ ಭಾರತ ತಂಡವನ್ನು ಕಳುಹಿಸಿದ್ದಕ್ಕಾಗಿ ಬಿಸಿಸಿಐ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಟೀಂ ಇಂಡಿಯಾ ಸರಿಯಾಗಿ ಆಡಲಿಲ್ಲ. ಹಾಗಾಗಿ ಸೋಲು ಅನುಭವಿಸಿದೆ. ಆದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ಮೇಲಿನ ದ್ವೇಷದಿಂದಾಗಿ ಕಾಂಗ್ರೆಸ್ ಭಾರತ ತಂಡದ ಸೋಲನ್ನು ಸಂಭ್ರಮಿಸುವುದನ್ನು ನೋಡುವುದು ಅಸಹ್ಯಕರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಅವರು ಶಶಿ ತರೂರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಂತರ ತಮ್ಮ ಪೋಸ್ಟ್ ಬಗ್ಗೆ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿರುವ ಶಶಿ ತರೂರ್, 'ಒಂದು ತಂಡವನ್ನು ಭಾರತ ಎಂದು ಕರೆದರೆ ಅದು ಲೇಬಲ್ಗೆ ಅರ್ಹವಾಗಿರಬೇಕು. ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಪಂತ್, ಹಾರ್ದಿಕ್, ಕುಲದೀಪ್, ಸಿರಾಜ್, ಬುಮ್ರಾ ಮತ್ತು ಅರ್ಷದೀಪ್, ಸಂಜು, ಜೈಸ್ವಾಲ್, ಚಾಹಲ್, ದುಬೆ ಆಡುತ್ತಿಲ್ಲ. ಉತ್ತಮ ತಂಡವನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ಎಡವಿದೆ. ಜೊತೆಗೆ ನಮ್ಮ ಆಟಗಾರರು ಸ್ವಾಭಿಮಾನವನ್ನು ತೋರಿಸದ ಸೋತಿರುವುದಕ್ಕೆ ಬೇಸರವೆನಿಸಿದೆ' ಎಂದು ತಿಳಿಸಿದ್ದಾರೆ.