ಮೈಸೂರು, ಜು.07(DaijiworldNews/AK): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ 50:50 ಅನುಪಾತದಲ್ಲಿ ಬದಲಿ ಭೂಮಿ ಪಡೆದವರ ಪಟ್ಟಿಯನ್ನು ಜಾಹೀರಾತು ಮೂಲಕ ಬಹಿರಂಗಪಡಿಸಲಾಗುತ್ತೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದರು.
50:50 ಅನುಪಾತದಲ್ಲಿ ಬದಲಿ ಭೂಮಿ ಹಂಚಿಕೆಯಲ್ಲಿ ಮುಡಾ ಅಕ್ರಮ ಎಸಗಿದೆ ಎಂಬ ಆರೋಪ ಕೇಳಿ ಬಂದ ಕಾರಣ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಗರಣದಲ್ಲಿ ಇರುವ ಭ್ರಷ್ಟರ ಪತ್ತೆಗಾಗಿ ತನಿಖೆ ನಡೆಯುತ್ತಿದೆ. ಹಗರಣ ಸಂಪೂರ್ಣ ಬಯಲಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಡ ಹಾಕುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇಲಿ ಹೋಯ್ತು, ಕೋತಿ ಹೋಯ್ತು ಅಂದ್ರೂ ಸಿಬಿಐಗೆ ಕೊಡಿ ಅಂದ್ರೆ ಹೇಗೆ? ನಮ್ಮ ಅಧಿಕಾರಿಗಳು ತನಿಖೆ ಮಾಡಲು ಸಮರ್ಥರಿದ್ದಾರೆ. ಬಿಜೆಪಿ ಅವಧಿಯಲ್ಲಿ ಎಷ್ಟು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆ ಹೇಳಿ ಎಂದು ತಿರುಗೇಟು ನೀಡಿದರು.
ಮುಡಾದಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಸಮಿತಿ ರದ್ದು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದೇನೆ. ಮೂವರ ಮಂದಿಯ ಸಮಿತಿಯಷ್ಟೇ ಇರಲಿ ಎಂದು ಹೇಳಿದ್ದೇನೆ. ಈ ಸಲಹೆಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಕಾನೂನಾತ್ಮಕವಾಗಿ ಜಮೀನು ಖರೀದಿಸಿದ್ದರು. 2010ರಲ್ಲಿ ಅರಿಶಿನ, ಕುಂಕಮ ಜೊತೆಗೆ ಗಿಫ್ಟ್ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ಭೂಮಿ ನೀಡಿದ್ದಾರೆ. ಪಾರ್ವತಮ್ಮ ಅವರು ಕಾನೂನಾತ್ಮಾಕವಾಗಿ ಜಮೀನು ಪಡೆದಿದ್ದಾರೆ.ಜಮೀನು ಗ್ರ್ಯಾಂಟ್ ಆಗಿ ಬಂದಿಲ್ಲ, ಮೂಲ ಮಾಲೀಕ ಖರೀದಿ ಮಾಡಿದ್ದಾರೆ. ನಿವೇಶನ ಇಂತಹ ಕಡೆನೇ ಕೊಡಿ ಅಂತಾ ಸಿಎಂ ಕುಟುಂಬ ಕೇಳಿಲ್ಲ. ಮುಡಾ ಮಾಡಿದ್ದು ತಪ್ಪು, ತಪ್ಪು ಒಪ್ಪಿಕೊಂಡು ನಿವೇಶನ ನೀಡಿದ್ದಾರೆ. ಮುಡಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ಶೇ100 ರಷ್ಟು ಕಾನೂನುಬದ್ಧ ಆಸ್ತಿ, ಇದರಲ್ಲಿ ಕೆಲವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿದರು.