ಬೆಂಗಳೂರು,ಜು.07(DaijiworldNews/AK): ರಾಜ್ಯದಲ್ಲಿ ಡೆಂಗ್ಯೂ ಅರ್ಭಟ ಮುಂದುವರಿದಿದೆ. 7 ಸಾವಿರಕ್ಕೂ ಅಧಿಕ ಕೇಸ್ಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 175 ಜನರಲ್ಲಿ ಡೆಂಗ್ಯೂ ಕೇಸ್ ವರದಿಯಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ 1908 ಹೊಸ ಪ್ರಕರಣ ಧೃಡಪಟ್ಟಿದೆ.
ಇನ್ನು ಡೆಂಗ್ಯೂನಿಂದ ಅಂಜನಾಪುರದ 11 ವರ್ಷದ ಬಾಲಕ ಗಗನ್ ಸಾವನ್ನಪ್ಪಿದ್ದಾನೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗಗನ್ ಚಿಕಿತ್ಸೆ ಫಲಿಸದೇ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾನೆ. ಗಗನ್ ಜಂಬೂಸವಾರಿ ದಿಣ್ಣೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ.
ಡೆಂಘೀ ಹರಡುವ ಪ್ರದೇಶಗಳಲ್ಲಿ ಲಾರ್ವಾ ಸರ್ವೇ ಮಾಡಲಾಗ್ತಿದೆ. ಲಾರ್ವಾ ನಾಶಕ್ಕೆ ನೀರಿನ ಟ್ಯಾಂಕ್ ಗಳಿಗೆ ಗಪ್ಪಿ, ಗಾಂಬೂಸಿಯಾ ಮೀನುಗಳನ್ನ ಬಿಡಲಾಗ್ತಾಯಿದೆ. ಕೆರೆಗಳು, ಮನೆ ಮನೆಗಳಲ್ಲಿ ತೆರೆದ ನೀರಿನ ಟ್ಯಾಂಕ್ಗಳಿಗೂ ಮೀನು ಬಿಡಲಾಗ್ತಿದೆ. ಆ ಮೂಲಕ ಡೆಂಘೀ ತಡೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಝೀಕಾ ವೈರಸ್ಗೆ ಮೊದಲ ಬಲಿ:
ರಾಜ್ಯದಲ್ಲಿ ಡೆಂಘೀ ಅರ್ಭಟದ ನಡುವೆ ಇದೀಗ ಝೀಕಾ ವೈರಸ್ ಶುರುವಾಗಿದೆ. ಶಿವಮೊಗ್ಗದ ಗಾಂಧಿನಗರದಲ್ಲಿ 74 ವರ್ಷದ ವೃದ್ಧ ಝೀಕಾ ವೈರಸ್ಗೆ ಮೊದಲ ಬಲಿಯಾಗಿದ್ದಾರೆ. ಇನ್ನು, ಜೂನ್ 19ರಂದು ವೃದ್ಧನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 21ರಂದು ವೃದ್ಧನಲ್ಲಿ ಝೀಕಾ ವೈರಸ್ ಪತ್ತೆಯಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕುಟುಂಬದವರು ಜುಲೈ 4ರಂದು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದೊಯ್ದಿದ್ದರು. ಆದ್ರೆ, ಮನೆಯಲ್ಲಿದ್ದ ವೃದ್ಧ ಶುಕ್ರವಾರ ಮೃತಪಟ್ಟಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ಆತಂಕ ಉಂಟು ಮಾಡಿದೆ.