ಲಕ್ನೋ, ಜು.06(DaijiworldNews/AA): ಹತ್ರಾಸ್ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಇಂದು ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಆರೋಪಿ ಸಂಜು ಯಾದವ್ನನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಇದಕ್ಕೂ ಮುನ್ನ ಮಧುಕರ್ ಮತ್ತು ಇತರ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಹತ್ರಾಸ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇವಪ್ರಕಾಶ್ ಮಧುಕರ್ ಮತ್ತು ಸಂಜು ಯಾದವ್ ಅವರನ್ನು ಇಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಇಬ್ಬರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿ ಉಮಾ ಶಂಕರ್ ಯಾದವ್ ಮಾಹಿತಿ ನೀಡಿದ್ದಾರೆ.
ಇನ್ನು ಕಾಲ್ತುಳಿತ ಪ್ರಕರಣದಲ್ಲಿ ಈಗಾಗಲೇ ಅರೆಸ್ಟ್ ಆಗಿರುವ ರಾಮಪ್ರಕಾಶ್ ಶಾಕ್ಯಾ ಅವರನ್ನು ನಾಳೆ ಕೋರ್ಟ್ ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಲಾಗಿದೆ.