ನವದೆಹಲಿ, ಜು.06(DaijiworldNews/AA): ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಜುಲೈ 23 ರಂದು ಮಂಡನೆಯಾಗಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದು, ಈಗಾಗಲೇ ಬಜೆಟ್ ತಯಾರಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಜುಲೈ 22ಕ್ಕೆ ಬಜೆಟ್ ಅಧಿವೇಶನ ಶುರುವಾಗಲಿದ್ದು, ಆಗಸ್ಟ್ 12 ರವರೆಗೆ ನಡೆಯಲಿದೆ. ಜುಲೈ 23ಕ್ಕೆ ಬಜೆಟ್ ಮಂಡನೆ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾದ ಬಳಿಕ ಮಂಡಿಸಲಾಗುತ್ತಿರುವ ಮೊದಲ ಬಜೆಟ್ ಇದಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಜುಲೈ 22ರಿಂದ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಕೇಂದ್ರ ಬಜೆಟ್ 2024-25 ಅನ್ನು ಲೋಕಸಭೆಯಲ್ಲಿ ಜುಲೈ 23 ರಂದು ಮಂಡಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಬಾರಿಯ ಬಜೆಟ್ ನಲ್ಲಿ ಬಡವರು, ಯುವಜನರು, ಮಹಿಳೆಯರು, ರೈತರಿಗೆ ಆದ್ಯತೆ ಸಿಗಲಿದೆ. ಹಾಗೆಯೇ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಐತಿಹಾಸಿಕ ಹೆಜ್ಜೆಗಳನ್ನು ಬಜೆಟ್ ನಲ್ಲಿ ಕೈಗೊಳ್ಳಲಾಗುವುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿಳಿಸಿದ್ದಾರೆ.