ಬೆಂಗಳೂರು, ಜು 06(DaijiworldNews/MS): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ' ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. "ಲೋಕಸಭೆ ಚುನಾವಣೆಗಾಗಿಯೇ ಭಾರತ್ ಅಕ್ಕಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಚುನಾವಣೆ ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಕ್ಕಿ ಕೊಡುವುದನ್ನು ಬಂದ್ ಮಾಡಿದ್ದಾರೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ನಾವು ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದೆವು. ಇದಕ್ಕಾಗಿ ಕೇಂದ್ರ ಸರ್ಕಾರದ ಬಳಿ ಅಕ್ಕಿ ಕೇಳಿದಾಗ ಕೊಡಲಿಲ್ಲ. ನಾವು ಫುಡ್ ಕಾರ್ಪೊರೇಷನ್ ದರ ನೀಡಿ ಅಕ್ಕಿ ಕೊಂಡುಕೊಳ್ಳುತ್ತೇವೆ ಅಂದರೂ ಕೂಡಾ ಅಕ್ಕಿ ಕೊಡಲಿಲ್ಲ. ಇದೀಗ ಚುನಾವಣೆ ಮುಗಿಯುತ್ತಿದ್ದಂತೆಯೇ ಭಾರತ್ ಬ್ರಾಂಡ್ ಅಕ್ಕಿ ಬಂದ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಕೇವಲ ಚುನಾವಣೆಗಾಗಿ ಮಾತ್ರ ಭಾರತ್ ಅಕ್ಕಿ ಕೊಟ್ಟಿದ್ದು.ಬಡವರ ಬಗ್ಗೆ ಬಿಜೆಪಿಗರಿಗೆ ಕಾಳಜಿಯಿಲ್ಲ. ಚುನಾವಣೆ ಬಳಿಕ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.