ದೆಹಲಿ, ಜು 05 (DaijiworldNews/ AK): ಬಿಹಾರದಲ್ಲಿ ಕಳೆದ 15 ದಿನಗಳಲ್ಲಿ 10 ಸೇತುವೆಗಳು ಕುಸಿದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ 16 ಎಂಜಿನಿಯರ್ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಹಾರ ಅಭಿವೃದ್ಧಿ ಕಾರ್ಯದರ್ಶಿ ಚೈತನ್ಯ ಪ್ರಸಾದ್, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಸೇತುವೆ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ 10ನೇ ಸೇತುವೆ ಕುಸಿದಿದ್ದು ಗುರುವಾರ ಸರನ್ ಜಿಲ್ಲೆಯಿಂದ ವರದಿಯಾಗಿದೆ. ಇದು 24 ಗಂಟೆಗಳ ಅವಧಿಯಲ್ಲಿ ಸರನ್ ಜಿಲ್ಲೆಯಲ್ಲಿ ಕುಸಿದ ಮೂರನೇ ಸೇತುವೆಯಾಗಿದೆ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್ಗಂಜ್ ಜಿಲ್ಲೆಗಳಲ್ಲಿ 10 ಸೇತುವೆಗಳು ಕುಸಿದಿವೆ.
ಬುಧವಾರ ನಡೆದ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆಯನ್ನು ನಡೆಸುವಂತೆ ಮತ್ತು ತಕ್ಷಣದ ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ” ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.