ಬೆಂಗಳೂರು, ಜು 04 (DaijiworldNews/ AK):ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇನ್ನೆಷ್ಟು ದಿನ ಜೀವ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಅರಮನೆ ಮೈದಾನದಲ್ಲಿ ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, . ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬುತ್ತಿದೆ. ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಸರಕಾರಕ್ಕೆ ಅಸ್ಥಿರತೆ ಕಾಡುತ್ತಿದೆ. ಕಾಂಗ್ರೆಸ್ ಒಳಜಗಳ ಮಿತಿ ಮೀರಿದೆ. ಹಾದಿ ಬೀದಿ ಹೊಡೆದಾಟ ಮುಂದುವರೆದಿದೆ. ಸಿಎಂ ಸ್ಥಾನಕ್ಕಾಗಿ ಕೂಗು, ಉಪ ಮುಖ್ಯಮಂತ್ರಿಗಾಗಿ ಕೂಗು, ಅಭಿವೃದ್ಧಿಗಾಗಿ ಹಣ ಕೇಳಿ ಕೂಗು ಕೇಳಿಸುತ್ತಿದೆ ಎಂದು ವಿಶ್ಲೇಷಿಸಿದರು.
ನರೇಂದ್ರ ಮೋದಿಜೀ ಅವರು 3ನೇ ಬಾರಿಗೆ ಅಧಿಕಾರಕ್ಕೆ ಏರಿದ್ದಾರೆ. ಇದು ದೇಶದ ಕಾರ್ಯಕರ್ತರ ಪರಿಶ್ರಮದ ಫಲ; ಇದೊಂದು ಐತಿಹಾಸಿಕ ಗೆಲುವು ಎಂದರು. ಇಂಡಿ ಒಕ್ಕೂಟ ಪೊಳ್ಳು ಭರವಸೆ ಮೂಲಕ ಅಧಿಕಾರ ಪಡೆಯಲು ಯತ್ನಿಸಿತ್ತು. ಆದರೆ, ಪ್ರಜ್ಞಾವಂತ ಮತದಾರರು ಅವರ ಷಡ್ಯಂತ್ರವನ್ನು ಬೆಂಬಲಿಸಲಿಲ್ಲ ಎಂದು ತಿಳಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ನರೇಂದ್ರ ಮೋದಿಜೀ ಅವರು ಸತತ 3ನೇ ಬಾರಿ ಪ್ರಧಾನಿಯಾಗಿದ್ದು, ಎನ್ಡಿಎ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲೂ ಬಿಜೆಪಿ- ಜೆಡಿಎಸ್ ಕೂಟ 19 ಸ್ಥಾನಗಳನ್ನು ಗೆದ್ದಿದೆ ಎಂದು ಸಂತಸ ವ್ಯಕ್ತಪಡಿಸಿದರು. 142 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಈಗ ಚುನಾವಣೆ ನಡೆದರೆ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಏರುವುದು ಖಚಿತ ಎಂದು ವಿಶ್ವಾಸದಿಂದ ನುಡಿದರು.
ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ದಾಸ್ ಅಗರ್ವಾಲ್ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಐತಿಹಾಸಿಕ ಗೆಲುವಿಗಾಗಿ ಧನ್ಯವಾದ ಸಮರ್ಪಿಸಿದರು. ಕಾರ್ಯಕರ್ತರ ಪ್ರಯತ್ನ, ಸಮರ್ಪಣಾ ಮನೋಭಾವದ ಕಾರಣ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.