ರಾಂಚಿ, ಜು.03(DaijiworldNews/AA): ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ.
ರಾಜ್ಯಪಾಲರಿಗೆ ಚಂಪೈ ಸೊರೇನ್ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಹೇಮಂತ್ ಸೊರೇನ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇದೀಗ ಹೇಮಂತ್ ಸೊರೇನ್ ಸರ್ಕಾರ ರಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರನ್ನು ಇಡಿ ಬಂಧಿಸುವ ಮೊದಲು ಮುಖ್ಯಮಂತ್ರಿ ಸ್ಥಾನ ತೊರೆದಿದ್ದರು. ಬಳಿಕ ಚಂಪೈ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಕಳೆದ ವಾರ ಅವರಿಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್, “ಆಪಾದಿತ ಅಪರಾಧದಲ್ಲಿ ಅವರು ತಪ್ಪಿತಸ್ಥನಲ್ಲ” ಎಂದು ನಂಬಲು ಕಾರಣವಿದೆ ಎಂದು ತೀರ್ಪು ನೀಡಿತ್ತು.