ನವದೆಹಲಿ, ಜು.03(DaijiworldNews/AA): ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಪಟ್ಟಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜಾಮೀನು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠ ತಿಳಿಸಿದೆ. ಕೇಜ್ರಿವಾಲ್ ಅವರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 439 ರ ಅಡಿಯಲ್ಲಿ ನೇರವಾಗಿ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂ.26 ರಂದು ಸಿಬಿಐ ಬಂಧಿಸಿತ್ತು. ವಿಚಾರಣೆ ಬಳಿಕ ಸಿಬಿಐ ಕೂಡಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇನ್ನು ಸಿಬಿಐಯ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಕೇಜ್ರಿವಾಲ್ ಮನವಿ ಮತ್ತು ಅವರನ್ನು ಏಜೆನ್ಸಿಯ ಕಸ್ಟಡಿಗೆ ಒಪ್ಪಿಸುವ ವಿಚಾರಣಾ ನ್ಯಾಯಾಲಯದ ಆದೇಶವೂ ಹೈಕೋರ್ಟ್ನಲ್ಲಿ ಬಾಕಿ ಉಳಿದಿದ್ದು, ಅದರ ವಿಚಾರಣೆಯು ಜುಲೈ 12 ರಂದು ನಡೆಯಲಿದೆ.