ಬೆಂಗಳೂರು, ಜು.03(DaijiworldNews/AA): ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಿ 42ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಕೋರ್ಟ್, ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್ ರೇವಣ್ಣನನ್ನು ಜುಲೈ 03ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇಂದು ಸೂರಜ್ ರೇವಣ್ಣ ಅವರ ಸಿಐಡಿ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಆದೇಶದಂತೆ ಸೂರಜ್ ಮತ್ತೆ ಜೈಲು ಪಾಲಾಗಿದ್ದಾರೆ.
ಸೂರಜ್ ರೇವಣ್ಣ ಪರ ವಕೀಲರು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಹೀಗಾಗಿ ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.