ಬೆಂಗಳೂರು, ಜು.02(DaijiworldNews/AK): ಮೈಸೂರಿನ ಮೂಡಾ ಹಗರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಆಗಲೇಬೇಕು. ಇದು ಸಿಎಂ, ಸಚಿವರ ಬುಡಕ್ಕೆ ಬರಲಿದೆ. ಮುಖ್ಯಮಂತ್ರಿಗಳ ಮುಖವಾಡವೂ ಕಳಚಿಬಿದ್ದಿದ್ದು, ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದರು.
ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ,ಭಂಡ ಕಾಂಗ್ರೆಸ್ ಸರಕಾರದ ಬಣ್ಣ ಬಯಲಾಗಿದೆ. ದಿನಕ್ಕೊಂದು ಹಗರಣ ಇವತ್ತು ಬಯಲಿಗೆ ಬರುತ್ತಿದೆ. ವಾಲ್ಮೀಕಿ ನಿಗಮದ್ದು ನೂರಾರು ಕೋಟಿಯ ಹಗರಣ. ಮುಖ್ಯಮಂತ್ರಿಗಳ ಜಿಲ್ಲೆ ಮೈಸೂರಿನ ‘ಮೂಡಾ’ದಲ್ಲಿ ಅವರ ಗಮನಕ್ಕೆ ಬರದೆ ಅಷ್ಟು ದೊಡ್ಡ ಹಗರಣ ಆಗುವುದು ಹೇಗೆ ಸಾಧ್ಯ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮುಖ್ಯಮಂತ್ರಿಗಳ ಧರ್ಮಪತ್ನಿಗೆ 15 ನಿವೇಶನಗಳನ್ನು ಕೊಟ್ಟಿದ್ದಾರೆ. ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೋಗಿ ಅಧಿಕಾರಿಗಳ ವರ್ಗಾವಣೆ ಮಾಡಿ, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ. ಈ ಹಗರಣ ಮುಚ್ಚಿಹಾಕುವ ಸಂಪೂರ್ಣ ಪ್ರಯತ್ನ ನಡೆದಿದೆ ಎಂದು ಆಕ್ಷೇಪಿಸಿದರು.
ಇವರ ಭ್ರಷ್ಟಾಚಾರವನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ವಿಷಯವನ್ನು ಇಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಪ್ರಕಟಿಸಿದರು. ಅಧಿವೇಶನದ ಸಂದರ್ಭದಲ್ಲಿ ಸದನದ ಒಳಗೆ ಮತ್ತು ಹೊರಗಡೆ ಹೋರಾಟ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಚುನಾವಣೆ ವೇಳೆ ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಲ್ಲದೆ, ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ರಾಜ್ಯದ ಜನತೆಗೆ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಇವರು ಹಗಲುದರೋಡೆಗೆ ಇಳಿದು ಜನರಿಗೆ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣ ಕೊಳ್ಳೆ ಹೊಡೆದು ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.