ಶಿವಮೊಗ್ಗ, ಜು.02(DaijiworldNews/AK): ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ನಿತಿನ್ ಜೈರಾಂ ಗಡ್ಕರಿಯವರನ್ನು ಸೋಮವಾರ ಗೃಹಕಚೇರಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭ ಅವರು, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಮಂಜೂರಾತಿಗಾಗಿ ಮನವಿ ಮಾಡಿದರು.
ಸದಸ್ಯರಾದ ಶ್ರೀ ಬಿ. ವೈ. ರಾಘವೇಂದ್ರ ಅವರು ಇಂದು ಗೃಹ ಕಛೇರಿಯಲ್ಲಿ ಬೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಮನವಿ ಮಾಡಿದ್ದಾರೆ.
ಆಗುಂಬೆ ಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ, ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರಿ ಸೇತುವೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಕೋರಲಾಯಿತು.
ಸಂಸದರ ಮನವಿ ಸ್ವೀಕರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಬಂಧಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಕಾಮಗಾರಿಗಳ ಯೋಜನಾ ವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿ, ಯೋಜನಾ ವರದಿ ಪಡೆದು ಮಂಜೂರಾತಿ ನೀಡಲು ಸಹ ಕ್ರಮವಹಿಸಲು ಆದೇಶಿಸಿದ್ದಾರೆ.