ಬೆಂಗಳೂರು, ಜು.01(DaijiworldNews/AA): ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಸೂರಜ್ ರೇವಣ್ಣನನ್ನು ಮತ್ತೆ 2 ದಿನ ಸಿಐಡಿ ಕಸ್ಟಡಿಗೆ ನೀಡಲು 42ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಯುವಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಅರೋಪದಡಿ ದಾಖಲಾದ ಪ್ರಕರಣದಲ್ಲಿ ಜೂನ್ 22ರಂದು ಸೂರಜ್ ರೇವಣ್ಣನನ್ನು ಬಂಧಿಸಲಾಗಿತ್ತು. ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸೂರಜ್ ರೇವಣ್ಣರನ್ನು ಹಾಜರುಪಡಿಸಿದಾಗ 8 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದು ಸೂರಜ್ ರ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು ಸೂರಜ್ಗೆ ಜುಲೈ 3ರವರೆಗೆ ಕಸ್ಟಡಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಇಂದು ಸೂರಜ್ ರೇವಣ್ಣರನ್ನು ಕರ್ಟ್ ಮುಂದೆ ಮುಂದೆ ಹಾಜರುಪಡಿಸಿದ ವೇಳೆ ಮತ್ತೆ 6 ದಿನ ಕಸ್ಟಡಿಗೆ ನೀಡುವಂತೆ ಎಸ್ಪಿಪಿ ಅಶೋಕ್ ನಾಯಕ್ ಮನವಿ ಮಾಡಿದರು. ವಾಯ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಬೇಕಿದೆ, ಪ್ರತಿನಿತ್ಯ ಏನೆಲ್ಲಾ ತನಿಖೆ ನಡೆದಿದೆ, ನಡೆಯುತ್ತಿದೆ ಎಂದು ಮಾಹಿತಿಯನ್ನು ಕೋರ್ಟ್ ಗೆ ನೀಡಿದರು. ಬಳಿಕ ಸೂರಜ್ ರೇವಣ್ಣರಿಗೆ 2 ದಿನ ಕಸ್ಟಡಿ ವಿಸ್ತರಿಸಿ ನ್ಯಾಯಾಧೀಶರು ತರ್ಪು ನೀಡಿದ್ದಾರೆ.