ಬೆಂಗಳೂರು, ಜೂ.30(DaijiworldNews/AA): ರಾಜ್ಯ ಸರ್ಕಾರದಲ್ಲಿ ಬರೀ ಕುರ್ಚಿಯ ಕಚ್ಚಾಟ ನಡೆದಿದೆ. ಇಷ್ಟು ಅನುಭವ ಇರುವ ಸಿಎಂ, ಡಿಸಿಎಂ, ಮಂತ್ರಿಗಳಿದ್ದರೂ ಕುರ್ಚಿಗಾಗಿ ಕಿತ್ತಾಟ ಮಾಡುವುದು ರಾಜ್ಯದ ಹಿತದೃಷ್ಟಿಯಿಂದ ಸರಿ ಅಲ್ಲ. ಈ ಸರ್ಕಾರವನ್ನು ಜನಸಾಮಾನ್ಯರು ಅತ್ಯಂತ ಖಂಡನೀಯವಾಗಿ ನೋಡುತ್ತಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಲೀಂ ಅಹ್ಮದ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಲೀಂ ಅಹ್ಮದ್ ವಿಧಾನ ಪರಿಷತ್ ಸದಸ್ಯರು ವಿಧಾನಸಭೆಯಲ್ಲಿ ಏನಾಗುತ್ತೆ? ಮಂತ್ರಿ-ಮಂತ್ರಿಗಳ ನಡುವೆ ಏನಾಗುತ್ತದೆ? ಸಿಎಂ, ಡಿಸಿಎಂ ನಡುವೇ ಏನಾಗುತ್ತಿದೆ ಎಂದು ತಿಳಿದುಕೊಳ್ಳಲಿ ಅವರಿಗೆ ಎಲ್ಲವು ಗೊತ್ತಿದ್ದು, ಹೀಗೆ ಹೇಳುತ್ತಿದ್ದಾರೋ ಅಥವಾ ಅವರ ಗಮನಕ್ಕೆ ಇಲ್ಲವೋ ನನಗೆ ಗೊತ್ತಿಲ್ಲ. ಸಲೀಂ ಅಹ್ಮದ್ ಬಗ್ಗೆ ನನಗೆ ಕನಿಕರ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದ್ದರೂ ಹೀಗೆ ಹೇಳಿದರೆ ನಾನು ಏನು ಹೇಳಲಿ ಎಂದು ಅವರು ಪ್ರಶ್ನಿಸಿದ್ದಾರೆ.
ಶಾಸಕರಿಗೆ ನೀಡುವ ಭತ್ಯೆ ಚಹಾ ಕುಡಿಯಲಿಕ್ಕೆ ಸಾಲಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯು.ಟಿ ಖಾದರ್ ಯಾವ ಆಧಾರದ ಮೇಲೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.