ಬೆಂಗಳೂರು, ಜೂ.30(DaijiworldNews/AA): ರಾಜ್ಯದ ರೈಲ್ವೆ ಯೋಜನೆಗಳಿಗೆ ರೈಲ್ವೆ ಸಚಿವಾಲಯವೇ ಸಂಪೂರ್ಣ ವೆಚ್ಚ ಭರಿಸಲಿದೆ. ವಂದೇ ಭಾರತ್ನಲ್ಲಿ ಎಲ್ಲ ವರ್ಗದ ಜನರೂ ಪ್ರಯಾಣಿಸುವಂತಾಗಬೇಕು ಎನ್ನುವುದು ಮೋದಿ ಬಯಕೆ ಎಂದು ರೈಲ್ವೇ ಖಾತೆಯ ಸಹಾಯಕ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಂದೇ ಭಾರತ್ ರೈಲು ಸಹಿತ ಎಲ್ಲ ರೈಲುಗಳ ದರ ಪಟ್ಟಿ ಪರಿಷ್ಕರಣೆ ಮಾಡುವ ಚಿಂತನೆ ಇದೆ. ತುಮಕೂರು-ಚಿತ್ರದುರ್ಗ- ದಾವಣಗೆರೆ ಮಾರ್ಗಕ್ಕೆ ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ರಾಜ್ಯದಲ್ಲಿರುವ ರೈಲ್ವೇ ವಿಭಾಗಗಳಲ್ಲಿ ಕೆಲಸ ಮಾಡಲು ಕನ್ನಡದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಮ್ಮಲ್ಲಿ ಪರ ರಾಜ್ಯದವರು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ರೈಲ್ವೇ ಇಲಾಖೆಯಿಂದ ರಾಜ್ಯದಲ್ಲಿ 1,699 ಕೋಟಿ ರೂ. ವೆಚ್ಚದ 93 ಆರ್ಒಬಿ-ಆರ್ಯುಬಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 49 ಕಾಮಗಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ವೆಚ್ಚ ಹಂಚಿಕೆ ಆಧಾರದ ಮೇಲೆ ಅನುಮೋದನೆ ನೀಡಲಾಗಿದೆ. ರಾಜ್ಯದ ಪಾಲಿನ ಅನುದಾನ ಇಲ್ಲದ ಸಂದರ್ಭದಲ್ಲಿ ಭಾರತೀಯ ರೈಲ್ವೇ ಶೇ. 100ರಷ್ಟು ಧನ ಸಹಾಯದೊಂದಿಗೆ ಆರ್ಒಬಿ-ಆರ್ಯುಬಿ ಕಾಮಗಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.