ರಾಂಚಿ, ಜೂ.29(DaijiworldNews/AA): ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಸಮಯ ಬಂದಿದೆ. ಮುಂಬರುವ ದಿನಗಳಲ್ಲಿ ಜಾರ್ಖಂಡ್ನಿಂದ ಬಿಜೆಪಿಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗುವುದು ಎಂದು ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಆದರೆ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ನನ್ನನ್ನು ಬಂಧಿಸಲು ಪಿತೂರಿ ನಡೆಸಿದವರ ವಿರುದ್ಧ ದಂಗೆ ನಡೆಸಲಾಗುವುದು. ಜಾರ್ಖಂಡ್ನ ಜನರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗರು ವಿಧಾನಸಭೆ ಚುನಾವಣೆಯನ್ನು ಮುಂದೂಡಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಅವರೇ ಬಯಸಿದಂತೆ ಯಾವುದೇ ದಿನ ಚುನಾವಣೆ ನಡೆದರೂ ನಾವು ಸಿದ್ಧರಾಗಿದ್ದೇವೆ. ಜಾರ್ಖಂಡ್ನಲ್ಲಿ ಗೆಲುವು ಸಾಧಿಸಬೇಕೆಂಬ ಬಿಜೆಪಿಗರ ಕನಸು ನನಸಾಗುವುದಿಲ್ಲ. ಬಿಜೆಪಿಗರು ಆದಿವಾಸಿಗಳನ್ನು ಸಿಎಂ ಮಾಡುವುದಾಗಿ ಘೋಷಿಸುತ್ತಾರೆ. ಆದರೆ, ಅವರು ಕೇವಲ ರಬ್ಬರ್ ಸ್ಟ್ಯಾಂಪ್ಗಳಾಗಿರುತ್ತಾರೆ ಎಂದು ಹೇಳಿದ್ದಾರೆ.