ನವದೆಹಲಿ, ಜೂ 26 (DaijiworldNews/ AK): ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮಾಡಿದ ಹೇಳಿಕೆ ಭಾರೀ ರಾಜಕೀಯ ಗದ್ದಲ ಸೃಷ್ಟಿಸಿತ್ತು.
ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಓವೈಸಿ ಅವರು ಪ್ಯಾಲೆಸ್ತೀನ್ನ ಯುದ್ಧ ಪೀಡಿತ ಪ್ರದೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು ಆಡಳಿತಾರೂಢ ಪಕ್ಷದ ಸಂಸದರು ಖಂಡಿಸಿದ್ದಾರೆ.
ಐದು ಬಾರಿ ಹೈದರಾಬಾದ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಓವೈಸಿ ಜೈ ತೆಲಂಗಾಣ ಮತ್ತು ಜೈ ಪ್ಯಾಲೆಸ್ತೀನ್ ಘೋಷಣೆಗಳನ್ನು ಕೂಗಿದ್ದರು. ಈ ಘೋಷಣೆಗೆ ಆಕ್ರೋಶ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ, ಓವೈಸಿ ಇಂಥಾ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನನಗೂ ಸಂವಿಧಾನದ ಬಗ್ಗೆ ಸ್ವಲ್ಪ ತಿಳಿದಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಓವೈಸಿ ಅವರು ಸಂಸತ್ತಿನಲ್ಲಿ ‘ಜೈ ಪ್ಯಾಲೆಸ್ತೀನ್’ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದು, ತನ್ನ ಹೇಳಿಕೆಗಳು ಖಂಡನೀಯ ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಹೇಳಿದರು. ಇಂಥಾ ಹೇಳಿಕೆಗಳಿಗಾಗಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಬೇಕು ಎಂದು ಹಲವಾರು ರಾಜಕೀಯ ನಾಯಕರು ಒತ್ತಾಯಿಸಿದ್ದಕ್ಕೆ ಓವೈಸಿ ಪ್ರತಿಕ್ರಿಯಿಸಿದ್ದಾರೆ.