ನವದೆಹಲಿ, ಜೂ.26(DaijiworldNews/AA): ಉಸಿರಾಡುವ ಗಾಳಿಗೊಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ ಎಂದು ಹಾಲಿನ ದರ ಏರಿಕೆ ಮಾಡಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದರ ಬೆಲೆ ಉಳಿಸಿದ್ದಾರೆ ಇವರು. ಎಲ್ಲಾ ದರವನ್ನು ಸಹ ಇವರು ಏರಿಕೆ ಮಾಡಿದ್ದಾರೆ. ಕೇವಲ ಹಾಲು, ಪೆಟ್ರೋಲ್ ಮಾತ್ರ ಅಲ್ಲ, ಎಲ್ಲವನ್ನು ಏರಿಕೆ ಮಾಡಿದ್ದಾರೆ. ಇನ್ನು ಉಸಿರಾಡುವ ಗಾಳಿಗೆ ಒಂದು ತೆರಿಗೆ ಹಾಕೋದು ಬಾಕಿ ಉಳಿದಿದೆ ಎಂದು ಕಿಡಿ ಕಾರಿದ್ದಾರೆ.
ವಿಧಾನ ಸೌಧ ಮಾರಾಟ ಮಾಡಿ ಅಂತ ಅವರಿಗೆ ಸಲಹೆ ಕೊಡುತ್ತಾರೆ. ಆಸ್ತಿ ಮಾರಿ ಅಂತ ಸಲಹೆ ಕೊಡೋಕೆ ವಿದೇಶದಿಂದ ನೇಮಕ ಮಾಡಿಕೊಳ್ಳಬೇಕಾ?. ಮನೆ ಸುಟ್ರೆ ಇದ್ದಿಲು ಸಿಗುತ್ತೆ ಅಂತ ಅವರು ಸಲಹೆ ಕೊಡ್ತಾರೆ. ಈ ಮನೆ ಹಾಳು ಸಲಹೆ ಪಡೆಯೋಕೆ ಸಿದ್ದರಾಮಯ್ಯನವರು ಬೇಕಾ?. ಖಜಾನೆ ದಿವಾಳಿ ಆಗಿದೆ, ಅದಕ್ಕಾಗಿ 11 ತಿಂಗಳಿಂದ ಗುತ್ತಿಗೆದಾತರಿಗೆ ಬಿಲ್ ನೀಡಿಲ್ಲ. ಇದೀಗ ರೈತರ ಆತ್ಮಹತ್ಯೆ ಸಂಖ್ಯೆ 750 ದಾಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯಾವುದನ್ನೂ ಬಿಟ್ಟಿಲ್ಲ. ಸದ್ಯಕ್ಕೆ ಬಿಟ್ಟಿರೋದು ಉಸಿರಾಡೋ ಗಾಳಿ ಹಾಗೂ ಹೆಣ ಈ ಎರಡನ್ನ ಮಾತ್ರ. ಬಿತ್ತನೆ ಬೀಜದ ದರ ಸಹ ಇವರು ಏರಿಕೆ ಮಾಡಿದ್ದಾರೆ, ಅತ್ಯಂತ ಪಾಪದ ಕೆಲಸ. ತೈಲ ಬೆಲೆ ಹೆಚ್ಚಳ ಮಾಡಿದ್ರು. ಬಸ್ ದರ ಏರಿಕೆ ಮಾಡೋ ಬಗ್ಗೆ ಹೇಳಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಬೆಲೆ ಏರಿಕೆ ಮಾಡದ ವಸ್ತು ಇಲ್ಲಾ ಎಂಬಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.