ಬೆಂಗಳೂರು, ಜೂ.24(DaijiworldNews/AA): ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣರನ್ನು ಜುಲೈ 8 ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ.
ಪ್ರಜ್ವಲ್ ರೇವಣ್ಣರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ಬಳಿಕ ಮಾಜಿ ಸಂಸದನ್ನು ಪುನಃ ಆನೇಕಲ್ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಕರೆತರಲಾಯಿತು. ಈ ಮೂಲಕ ಜರ್ಮನಿಯಿಂದ ವಾಪಸ್ಸಾದ ಬಳಿಕ ಅರೆಸ್ಟ್ ಆದ ಪ್ರಜ್ವಲ್ ರನ್ನು 3ನೇ ಬಾರಿಗೆ ಸೆಂಟ್ರಲ್ ಜೈಲಿಗೆ ಕರೆತರಲಾಗಿದೆ.
ಇಂದು ವಿಚಾರಣೆ ವೇಳೆ ಪ್ರಜ್ವಲ್ ಪರ ವಕೀಲರು ಪ್ರಜ್ವಲ್ ಗ್ಯಾಸ್ಟ್ರಿಕ್ ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ನ್ಯಾಯಾಧೀಶರಾದ ಕೆಎನ್ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಇದೇ ಮನವಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವಂತೆ ನ್ಯಾಯಾಧೀಶರು ವಕೀರಿಗೆ ಸೂಚಿಸಿದ್ದಾರೆ. ಒಂದು ವೇಳೆ ಜೈಲು ಅಧಿಕಾರಿಗಳು ಚಿಕಿತ್ಸೆ ಒದಗಿಸಲು ನಿರಾಕರಿಸಿದರೆ ತಮಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ತಿಳಿಸಿದ್ದಾರೆ ಎನ್ನಲಾಗಿದೆ.