ನವದೆಹಲಿ, ಜೂ.24(DaijiworldNews/AA): ಹರಿಯಾಣವು ದೆಹಲಿಯ ನ್ಯಾಯಯುತವಾದ ನೀರನ್ನು ಬಿಡುಗಡೆ ಮಾಡುವವರೆಗೆ ಆರೋಗ್ಯ ಹದಗೆಟ್ಟಿದ್ದರೂ ಅನಿರ್ದಿಷ್ಟ ಉಪವಾಸ ಮುಂದುವರೆಸುವುದಾಗಿ ಸಚಿವೆ ಅತಿಶಿ ಹೇಳಿದ್ದಾರೆ.
ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅತಿಶಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಅನಿರ್ದಿಷ್ಟ ಉಪವಾಸ ಸತ್ಯಾಗ್ರಹದಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದು, ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆದರೆ ವೈದ್ಯರ ಸಲಹೆ ತಿರಸ್ಕರಿಸಿರುವ ಸಚಿವೆ ಅತಿಶಿ ನನ್ನ ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟವು ಕುಸಿಯುತ್ತಿದೆ ಮತ್ತು ನನ್ನ ತೂಕವು ಕಡಿಮೆಯಾಗಿದೆ. ಇದು ದೀರ್ಘಾವಧಿಯಲ್ಲಿ ನನ್ನ ದೇಹದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಈ ಎಚ್ಚರಿಕೆಗಳ ಹೊರತಾಗಿಯೂ ನಾನು ಆಸ್ಪತ್ರೆಗೆ ದಾಖಲಾಗುವುದಿಲ್ಲ. ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ನೀರು ಬಿಡುವವರೆಗೆ ನಾನು ಅನಿರ್ದಿಷ್ಟ ಉಪವಾಸ ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.