ಬೆಂಗಳೂರು, ಜೂ.24(DaijiworldNews/AK): ಕಾಂಗ್ರೆಸ್ ಪಕ್ಷ ದೇಶವಿರೋಧಿ ಮತ್ತು ಸಂವಿಧಾನದ ವಿರೋಧಿ. ಇಂಥ ಪಕ್ಷ ಇವತ್ತು ದೇಶದ ಮುಂದೆ ತಲೆಬಾಗಿ ಕೈಕಟ್ಟಿಕೊಂಡು ‘ತುರ್ತು ಪರಿಸ್ಥಿತಿ ಸಂಬಂಧ ದೇಶಕ್ಕೆ ದ್ರೋಹ ಬಗೆದಿದ್ದೇವೆ. ಸಂವಿಧಾನಕ್ಕೆ ಅಪಚಾರ ಮಾಡಿದ್ದೇವೆ’ ಎಂಬುದಾಗಿ ಒಪ್ಪಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದರು.
ಭಾರತದ ಮೇಲೆ ಶ್ರೀಮತಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಈ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದ ಬಳಿ ಇಂದು ಏರ್ಪಡಿಸಿದ್ದ ಪೋಸ್ಟರ್ ಅಭಿಯಾನದ ಸಂದರ್ಭದಲ್ಲಿ ಅವರು ಮಾತನಾಡಿದ ಅವರು,ಬಿಜೆಪಿಯ ನಾವು ಸಂವಿಧಾನ ಬದಲಿಸಿದ್ದಾಗಿ ಹೇಳುತ್ತಾರೆ. ನಾವೇನೂ ಬದಲಾವಣೆ ಮಾಡಿಲ್ಲ. ಮಾಡದೇ ಇದ್ದರೂ ನಮ್ಮ ಮೇಲೆ ಅಪವಾದ ಹೊರಿಸುತ್ತಾರೆ ಎಂದು ಟೀಕಿಸಿದ ಅವರು, ಸಂವಿಧಾನಕ್ಕೆ ಅಪಚಾರ ಬಗೆದವರು, ದ್ರೋಹ ಬಗೆದವರು ಕಾಂಗ್ರೆಸ್ಸಿಗರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಂಥ ಕಾಂಗ್ರೆಸ್ ಪಕ್ಷವು ದೇಶದ ಜನರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ರಾಮಲೀಲಾ ಮೈದಾನಕ್ಕೆ ಬಂದು ದೇಶದ ಮುಂದೆ ತಲೆಬಾಗಿ ನಿಂತು, ದೇಶದ ಜನರ ಮುಂದೆ ತಲೆಬಗ್ಗಿಸಿ, ನಾವು ಸಂವಿಧಾನಕ್ಕೆ ಅಪಚಾರ ಮಾಡಿದ್ದಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ನಾವು ಯಾವುದೇ ಕಾರಣಕ್ಕೂ ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ನುಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸಂವಿಧಾನ ನಮಗೆ ಭಗವದ್ಗೀತೆ ಇದ್ದಂತೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇಂಥ ಸಂವಿಧಾನಕ್ಕೆ ಅಪಚಾರ ಬಗೆದ ಪಾಪಿಗಳು ಕಾಂಗ್ರೆಸ್ಸಿಗರು ಎಂದು ದೂರಿದರು.ನನ್ನನ್ನು ಬಂಧಿಯಾಗಿ ಮಾಡಿದ್ದ ಬ್ಯಾರಕ್ ಇನ್ನೂ ಉಳಿದಿದೆ ಎಂದು ನೆನಪಿಸಿಕೊಂಡರು. ಅಲ್ಲಿಂದಲೇ ನಾವೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ವಿದ್ಯಾರ್ಥಿಯಾಗಿದ್ದ ತಾನು ಇತರ ವಿದ್ಯಾರ್ಥಿಗಳೊಂದಿಗೆ ಜನಸಂಘ, ಆರೆಸ್ಸೆಸ್ ಪರವಾಗಿ ಇಂದಿರಾ ಗಾಂಧಿಯವರ ವಿರುದ್ಧ ಧಿಕ್ಕಾರ ಕೂಗಿದ್ದನ್ನು ವಿವರಿಸಿದರು.
ಅಲ್ಲಿಂದ ಬಂಧಿಸಿ ಚಿತ್ರಹಿಂಸೆ ನೀಡಿದ್ದನ್ನು ತಿಳಿಸಿದರು. 200 ಜನಕ್ಕೆ ಒಂದೇ ಬಾತ್ರೂಂ ಇತ್ತು. ಸರಿಯಾಗಿ ಊಟವೂ ಕೊಡುತ್ತಿರಲಿಲ್ಲ. ಪ್ರತಿದಿನ ನಾಯಕರು ಮಾರ್ಗದರ್ಶನ ಮಾಡುತ್ತಿದ್ದರು. ಅಂಥ ದೇಶದ್ರೋಹಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಎಮರ್ಜೆನ್ಸಿ ಎಂದರೆ ಕರಾಳ ದಿನ ಎಂದು ನೆನಪಿಸಿಕೊಂಡರು.
ಕಾಂಗ್ರೆಸ್ ದುರುಳರ, ಮೋಸಗಾರರ, ದೇಶವಿರೋಧಿ ನೀತಿಗಳಿರುವ ಪಕ್ಷ ಎಂದು ಟೀಕಿಸಿದರು. ಬಳಿಕ, ಕಾಂಗ್ರೆಸ್ ಕಚೇರಿಗೆ ಈ ಪೋಸ್ಟರ್ಗಳನ್ನು ಅಂಟಿಸುವುದಾಗಿ ಪ್ರಕಟಿಸಿದರು. ನಂತರ ಎಲ್ಲರನ್ನೂ ಪೊಲೀಸರು ಬಂಧಿಸಿದರು.
ಪೋಸ್ಟರ್ ಅಭಿಯಾನದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್, ಶಾಸಕ ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಕೇಶವಪ್ರಸಾದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.